ಕಲಬುರಗಿಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ : ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಕಿಡಿ

Chandu Patil
Published on

ನಗರ ಮತ್ತು ಜಿಲ್ಲೆಯಲ್ಲಿ ಹೆಚ್ಚಿದ ಕೊಲೆ ಅಕ್ರಮ ಚಟುವಟಿಕೆ

ಕಲಬುರಗಿ : ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮತ್ತು ಪೊಲೀಸರು ವಿಫಲವಾಗಿದ್ದು, ಕಲಬುರಗಿ ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷರಾದ ಚಂದು ಪಾಟೀಲ್ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ಬಾಹಿರ ಮತ್ತು ಅಕ್ರಮ ಅಕ್ರಮ ಚಟುವಟಿಕೆಗಳು ಹೆಚ್ಚಿವೆ. ಮನೆಗಳ್ಳತನ, ಬೆದರಿಸಿ ಸುಲಿಗೆ ಮಾಡುವುದು, ಗಾಂಜಾ ಮಾರಾಟ, ಮೀಟರ್ ಬಡ್ಡಿ ದಂಧೆ, ಅಮಾಯಕರಿಗೆ ಕಿರುಕುಳ ನೀಡುವುದು ಮೊದಲಾದ ದುಷ್ಕೃತ್ಯಗಳು ಹೆಚ್ಚಿದ್ದು ಜನರು ಆತಂಕದಲ್ಲಿರುವAತಾಗಿದೆ. ಕೆಲವು ಕಡೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಓಡಾಡುವುದು ಕಷ್ಟಕರವಾಗಿದೆ ಎಂದು ಗುರುವಾರ ಇಲ್ಲಿ ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಚೆಗೆ ಕಟ್ಟಡ ಕಾರ್ಮಿಕ ಕೆಲಸಕ್ಕೆ ಎಂದು ಕರೆದುಕೊಂಡು ಹೋದ ಮಹಿಳೆ ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆ ಮಾಡಲು ಪೊಲೀಸರಿಂದ ಸಾಧ್ಯವಾಗಿಲ್ಲ. ಮೀಟರ್ ಬಡ್ಡಿ ಸಲುವಾಗಿ ವ್ಯಕ್ತಿಯೊಬ್ಬನ ಕೊಲೆಯಾದರು ಆರೋಪಿ ಇನ್ನೂ ಸಿಕ್ಕಿಲ್ಲ. ಕಲಬುರಗಿ ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಎನ್ನುವುದು ಕನಸಿನ ಮಾತಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಲಬುರಗಿಯಲ್ಲಿ ಕೊಲೆ ಸುಲಿಗೆ, ಅತ್ಯಾಚಾರ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಕಳ್ಳತನ ಪ್ರಕರಣಗಳಿಗೆ ಕಡಿವಾಣ ಬೀಳುತ್ತಿಲ್ಲ. ಇದು ಜನರನ್ನು ಮೇಲಿಂದ ಮೇಲೆ ಭಯಗೊಳ್ಳುವಂತೆ ಮಾಡುತ್ತಿದೆ. ಪೊಲೀಸರು ಘಟನೆ ನಡೆದಾಗ ಮಾತ್ರ ಎಚ್ಚೆತ್ತು ಓಡಾಡಿದಂತೆ ಮಾಡುತ್ತಾರೆ.ಕೆಲ ದಿನಗಳ ನಂತರ ಮರೆತು ಬಿಡುವುದರಿಂದ ಮೊದಲಿನ ಪರಿಸ್ಥಿತಿಗೆ ವ್ಯವಸ್ಥೆ ಬಂದು ನಿಲ್ಲುತ್ತಿದೆ ಎಂದು ಚಂದು ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್ಚಿದ ಅಕ್ರಮ ಮರಳು ಸಾಗಣೆ

ಜಿಲ್ಲೆಯಲ್ಲಿ ಭೀಮಾ, ಕಾಗಿಣಾ ಇನ್ನಿತರ ನದಿಗಳಿಂದ ಅಕ್ರಮವಾಗಿ ಗಣಿಗಾರಿಕೆ ಮಾಡಿ ಮರಳು ಸಾಗಣೆ ಮಾಡುವುದು ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಜಿಲ್ಲಾಡಳಿತ ಮತ್ತು ಪೊಲೀಸ್ ಹಾಗೂ ಗಣಿ ಇಲಾಖೆಯವರು ಮಾಡುತ್ತಿಲ್ಲ. ರಾಜಸ್ವ ಪಾವತಿಸದೆ ಮರಳು ಸಾಗಣೆ ಮಾಡಲಾಗುತ್ತಿದೆ. ಇದಕ್ಕೆ ಆಡಳಿತ ನಡೆಸುವವರೆ ರಕ್ಷಣೆ ನೀಡುತ್ತಿರುವುದರಿಂದ ಅಂತಹ ಅಕ್ರಮ ನಡೆದಿಲ್ಲ ಎಂದು ಬಿಂಬಿಸಲಾಗುತ್ತಿದೆ. ಅಧಿಕಾರಿಗಳು ಅಕ್ರಮ ಮರಳು ಸಾಗಣೆಕೋರರ ಜತೆಗೆ ಶಾಮೀಲಾಗಿದ್ದರಿಂದ ಕಡಿವಾಣ ಹಾಕುವುದು ಸಾಧ್ಯವಾಗುತ್ತಿಲ್ಲ ಎಂದು ಚಂದು ಪಾಟೀಲ್ ಆರೋಪಿಸಿದ್ದಾರೆ.

ನಗರದಲ್ಲಿ ವಾರಕ್ಕೆರಡು ಕೊಲೆಗಳಾಗುತ್ತಿವೆ. ಕೊಲೆಗಳಾದರೂ ಆರೋಪಿಗಳನ್ನು ಪತ್ತೆ ಮಾಡುವ ಕೆಲಸ ಆಗುತ್ತಿಲ್ಲ. ಇನ್ನೊಂದೆಡೆ ಅಮಾಯಕ ಹೆಣ್ಣು ಮಕ್ಕಳು ಕಾಣೆಯಾಗುವ ಪ್ರಕರಣಗಳು, ದ್ವಿಚಕ್ರ ವಾಹನಗಳ ಕಳ್ಳತನ ಕೇಸ್‌ಗಳು ಹೆಚ್ಚಾಗುತ್ತಿವೆ. ಇದು ನೋಡಿದಾಗ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಿದ್ದಾರೆ.

ಕೂಡಲೇ ಸರ್ಕಾರ ಗಮನ ಹರಿಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಈ ನಿಟ್ಟಿನ್ಲಲಿ ಸೂಕ್ತ ನಿರ್ದೇಶನ ನೀಡುವ ಮೂಲಕ ನಗರ ಮತ್ತು ಜಿಲ್ಲೆಯಲ್ಲಿ ಹದಗೆಟ್ಟಿರುವ ಕಾನೂನು ಸುವಸ್ಥೆ ಸುಧಾರಣೆ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಚಂದು ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net