

ಬಸವಕಲ್ಯಾಣ: ಬಿಇಟಿ ಇಂಜಿನಿಯರಿಗ್ ಕಾಲೇಜು ಮೈದಾನದಲ್ಲಿ ನಡೆದ ಕಲಬುರಗಿ ವಿಭಾಗ ಮಟ್ಟದ ಅಂತರ್ ಕಾಲೇಜು ಟೇಬಲ್ ಟೆನಿಸ್ ಟೂರ್ನಿಯ ಅತ್ಯುತ್ತಮ ಪ್ರದರ್ಶನ ನೀಡಿದ ಬಾಗಲಕೋಟೆ ಮುತ್ತು ಕಲಬುರಗಿ ತಂಡಗಳು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರೆ, ಭಾಲ್ಕಿ ಮತ್ತು ಹೊಸಪೇಟೆ ತಂಡಗಳು ರನ್ನರ್ ಅಪ್‌ಗೆ ತೃಪ್ತಿ ಪಟ್ಟುಕೊಂಡವು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಡಿ ನಡೆದ ಟೂರ್ನಿಯ ಪುರುಷ ವಿಭಾಗದಲ್ಲಿ ಕಲಬುರಗಿ ವಿಭಾಗ ಮಟ್ಟದ ಅಂತರ್ ಕಾಲೇಜು ಟೇಬಲ್ ಟೆನಿಸ್ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಬಾಗಲಕೋಟೆ ಇಂಜಿನಿಯರಿಂಗ್ ಕಾಲೇಜು ವಿನ್ನರ್ ಮತ್ತು ಭಾಲ್ಕಿಯ ಭೀಮಣ್ಣ ಖಂಡ್ರೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರನ್ನರ್ ಅಪ್ ಆಗಿ ಹೊರಹೊಮ್ಮಿತು.
ಮಹಿಳಾ ವಿಭಾಗದಲ್ಲಿ ಕಲಬುರಗಿಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜು ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆದರೆ, ಹೊಸಪೇಟೆಯ ಪ್ರೌಢದೇವರಾಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.
ಬುಧವಾರ ಸಂಜೆ ನಡೆದ ಟೂರ್ನಿ ಸಮಾರೋಪದಲ್ಲಿ ವಿಜೇತ ತಂಡಗಳಿಗೆ ಬಿಇಟಿ ನಿರ್ದೇಶಕ ಹಾಗೂ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ ಟ್ರೋಫಿ ವಿತರಿಸಿ ಪ್ರೋತ್ಸಾಹಿಸಿದರು.
ರೆಫ್ರಿಗಳಾದ ಕಲಬುರಗಿಯ ಆನಂದ, ಮಂಜುನಾಥ, ಮೊಹ್ಮದ್ ಒಮರ್, ಉಪ ಪ್ರಾಚಾರ್ಯ ಡಾ.ಅರುಣಕುಮಾರ ಯಲಾಲ್, ಪ್ರಮುಖರಾದ ಸುವರ್ಣಲತಾ ಎಚ್., ಡಾ.ಎಸ್. ಜಲ್ದೆ, ಡಾ.ಅನೀಲ ಪಾಟೀಲ್, ಡಾ.ಸುದರ್ಶನ ಎಂ., ವಿದ್ಯಾಸಾಗರ ಮೂಲಗೆ, ಪ್ರವೀಣಕುಮಾರ ಬಿ., ದತ್ತಣ್ಣ ಮಂಟಗಿ, ಶಂಕರ ಆಗರಗಿ, ಗೋವಿಂದ ಕನಕಾ ಇತರರಿದ್ದರು.
ವಿಭಾಗದ ಮಟ್ಟದ ಕ್ರೀಡಾಕೂಟದಲ್ಲಿ ವಿಜಯಪುರ, ಬಾಗಲಕೋಟೆ, ಹೊಸಪೇಟೆ, ಬಳ್ಳಾರಿ, ಕಲಬುರಗಿ, ಬೀದರ್, ಭಾಲ್ಕಿ ಹಾಗೂ ಬಸವಕಲ್ಯಾಣದ ಇಂಜಿನಿಯರಿಂಗ್ ಕಾಲೇಜು ತಂಡಗಳು ಪಾಲ್ಗೊಂಡಿದ್ದವು.
ದೈಹಿಕ ಸದೃಢತೆ ಜತೆಗೆ ಮಾನಸಿಕ ಆರೋಗ್ಯಕ್ಕೂ ಕ್ರೀಡೆಗಳು ಸಹಕಾರಿಯಾಗಿದ್ದು, ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ವಿದ್ಯಾರ್ಥಿಗಳು ಕ್ರೀಡಾಸಕ್ತಿ ಬೆಳೆಸಿಕೊಂಡು ಇಂತಹ ಟೂರ್ನಿಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಪ್ರತಿಭೆ ಮೆರೆಯಬೇಕು.
| ಡಾ.ಅಶೋಕಕುಮಾರ ವಣಗೇರಿ ಪ್ರಾಚಾರ್ಯ, ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜು