

ರಮೇಶ ಮೇಳಕುಂದಾ ಕಲಬುರಗಿ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುಷ್ಠಾನವಾಗುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಬೇಕಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ 18 ತಿಂಗಳಿಂದ ನಡೆಯದೆ ಸಮಿತಿ ಉದ್ದೇಶವೇ ಹಳಿ ತಪ್ಪಿದಂತಾಗಿದೆ.
ಜಿಲ್ಲೆಯ ವಿವಿಧ ಅಭಿವೃದ್ಧಿ, ಸಮಾಜ ಕಲ್ಯಾಣ ಇತರ ಜನಸ್ನೇಹಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಸ್ಥಾಪಿಸಿದ ದಿಶಾ ಸಮಿತಿಯಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಆದರೆ 2022ರ ಜೂನ್‌ನಲ್ಲಿ ನಡೆದ ದಿಶಾ ಸಭೆ ಹೊರತುಪಡಿಸಿ ಇದುವರೆಗೆ ಒಮ್ಮೆಯೂ ಕರೆಯದಿರುವುದರಿಂದ ಯೋಜನೆಗಳ ಸ್ಥಿತಿಗತಿ ತಿಳಿಯದಂತಾಗಿದೆ.
ಕೋವಿಡ್‌ನಿಂದ ಆರ್ಥಿಕ ಹೊಡೆತ, ಅತಿವೃಷ್ಟಿ, ಅನಾವೃಷ್ಟಿ, ಬೆಳೆ ಹಾನಿಯಂತಹ ಸರಣಿ ಸಮಸ್ಯೆಗಳ ಮಧ್ಯೆ ಜಿಲ್ಲೆಯ ಜನರು ಸಂಕಷ್ಟದಲ್ಲಿದ್ದು, ಅವರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಬೇಕಿದೆ. ಆದರೆ ಯೋಜನೆಗಳ ಪ್ರಗತಿ ಕುರಿತು ಮೇಲ್ವಿಚಾರಣೆ, ಪ್ರಗತಿ ಪರಿಶೀಲನೆ ನಡೆಸಬೇಕಿದ್ದ ದಿಶಾ ಸಮಿತಿಯೇ ಆ ಕಾರ್ಯವನ್ನು ಮೈಮರೆತಿದ್ದು ದುರಂತವೇ ಸರಿ.
ಸಭೆಯಲ್ಲಿ ಸಮಿತಿಯ ಎಲ್ಲ ಸದಸ್ಯರು, ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಅನುಷ್ಠಾನದ ಹೊಣೆ ಹೊತ್ತಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ.
ಮೂರು ತಿಂಗಳಿಗೊಮ್ಮೆ (ತ್ರೈಮಾಸಿಕ) ನಡೆಯಬೇಕಿದ್ದ ಸಭೆ ಎರಡು ವರ್ಷವಾದರೂ ನಡೆಯದಿರುವುದು ಜಿಲ್ಲೆಯ ಜನಪ್ರತಿನಿಧಿಗಳ ನಿರಾಸಕ್ತಿಗೆ ಸಾಕ್ಷಿಯಾಗಿದೆ.
ಯಾರಿದ್ದಾರೆ ಸಮಿತಿಯಲ್ಲಿ?: ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ (ಅಧ್ಯಕ್ಷ), ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ.ಉಮೇಶ ಜಾಧವ್ (ಉಪಾಧ್ಯಕ್ಷರು), ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಾಲಿಕೆ ಮೇಯರ್ ಸದಸ್ಯರಾಗಿದ್ದು, ಜಿಲ್ಲಾಧಿಕಾರಿ ಕಾರ್ಯದರ್ಶಿ ಆಗಿದ್ದಾರೆ. ಸಮಾಜ ಸೇವಕರು ಸದಸ್ಯರಾಗಿರುತ್ತಾರೆ.
ಯಾರು ಕರೆಯಬೇಕು ಸಭೆ?: ನಿಯಮದಂತೆ ದಿಶಾ ಸಮಿತಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಸಭೆ ಕರೆಯಬೇಕು. ಅಧ್ಯಕ್ಷರಿಗೆ ಸಮಯವಿಲ್ಲದಿದ್ದರೆ ಸಮಿತಿ ಕಾರ್ಯದರ್ಶಿಯವರು ಪರ್ಯಾಯವಾಗಿ ವಿನಂತಿ ಮೇರೆಗೆ ಉಪಾಧ್ಯಕ್ಷರ ನೇತೃತ್ವದಲ್ಲಿ ಸಭೆ ಕರೆಯಬಹುದು. ಆದರೆ ಜಿಲ್ಲೆಯಲ್ಲಿ ಈ ಪ್ರಕ್ರಿಯೆಯೇ ನಡೆಯುತ್ತಿಲ್ಲ. ಇದರಿಂದ ವಿಶೇಷವಾಗಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಆಗುತ್ತಿಲ್ಲ. ೨೦೨೩ರ ಅ.೨೮ರಂದು ಸಭೆ ಕರೆದು ಮುಂದೂಡಲಾಗಿದೆ. ೨೦೨೨ರ ಜೂನ್‌ನಿಂದ ಇದುವರೆಗೆ (೧೮ ತಿಂಗಳಿAದ) ಒಮ್ಮೆಯೂ ಮೀಟಿಂಗ್ ನಡೆದಿಲ್ಲ.
ಪರಿಶೀಲನೆ ವಿಷಯಗಳು: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ, ಅಂತ್ಯೋದಯ, ಗ್ರಾಮೀಣ ಕೌಶಲ, ಸಮಾಜ ಕಲ್ಯಾಣ ಇಲಾಖೆ, ಪ್ರಧಾನ ಮಂತ್ರಿ ಅವಾಸ್, ಸ್ವಚ್ಛ ಭಾರತ್ ಮಿಷನ್, ಗ್ರಾಮೀಣ ಕುಡಿಯುವ ನೀರು, ಕೃಷಿ ಸಿಂಚಾಯಿ, ಡಿಜಿಟಲ್ ಇಂಡಿಯಾ, ಗ್ರಾಮ ಜ್ಯೋತಿ, ಜಿಲ್ಲೆಯ ವಿವಿಧೆಡೆಯ ಸಣ್ಣ ಪುಟ್ಟ ಸೇರಿ ಗಂಭೀರ ಸಮಸ್ಯೆಗಳು ಸೇರಿ ಕೇಂದ್ರ, ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು ಪರಿಶೀಲನೆ, ಪರಿಹಾರದ ಚರ್ಚೆಯನ್ನು ಮಾಡಲಾಗುತ್ತದೆ.
ಸಂಸದನಾದ ಆರಂಭದಲ್ಲಿ ಎರಡು ವರ್ಷ ಕೋವಿಡ್ ಇತ್ತು. ಆಗಲೇ ನಾವು ಸಭೆ ಮಾಡಿದ್ದೆವು. ಇದೀಗ ಎರಡು ವರ್ಷದಿಂದ ದಿಶಾ ಸಭೆ ನಡೆದಿಲ್ಲ. ಇದರಲ್ಲಿ ರಾಜಕೀಯ ಮಾಡುವುದಿಲ್ಲ. ಪ್ರಸ್ತುತ ಜಿಲ್ಲೆಯಲ್ಲಿ ಗಂಭೀರ ಸಮಸ್ಯೆಗಳಿವೆ. ಸಣ್ಣಪುಟ್ಟ ವಿಷಯಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ವೇದಿಕೆಯಾಗಿದೆ. ಹಿಂದಿನ ಸಭೆಯಲ್ಲಿ ಚಿತ್ತಾಪುರದ ಬಲರಾಮ ವೃತ್ತದ ಸಮಸ್ಯೆ ಚರ್ಚಿಸಿದ್ದು, ಭಾಗಶಃ ಸಮಸ್ಯೆ ಬಗೆಹರಿದಿದೆ. ಹೀಗೆ ಹಲವು ಸಮಸ್ಯೆಗಳಿಗೆ ಅಧಿಕಾರಿಗಳನ್ನು ಕೇಳಲು ಆಗಲ್ಲ. ಆದರೆ ಸಭೆಯನ್ನೇ ಕರೆಯುತ್ತಿಲ್ಲ. ಈ ಕುರಿತು ಸಮಿತಿ ಕಾರ್ಯದರ್ಶಿಗೆ (ಜಿಲ್ಲಾಧಿಕಾರಿಗೆ) ಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ.| ಡಾ.ಉಮೇಶ ಜಾಧವ್ಸಂಸದ