ಪಾಲಿಕೆ ನಿವೃತ್ತ ನೌಕರರ ಪಿಂಚಣಿ ನೀಡಿ

2112Klb06
Published on

ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ನಿವೃತ್ತ ನೌಕರರಿಗೆ ಅರ್ಹತಾದಾಯಕ ಹೆಚ್ಚುವರಿ ಸೇವೆ ಸೇರಿಸಿ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿ ಪಾಲಿಕೆ ನಿವೃತ್ತ ನೌಕರರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪಾಲಿಕೆ ಕಚೇರಿ ಕಟ್ಟಡದ ಎದುರು ಪ್ರತಿಭಟನೆ ನಡೆಸಿದ ನಿವೃತ್ತ ನೌಕರರು, ಸರ್ಕಾರ ಕೋರಿರುವ ಸೇವಾ ಮಾಹಿತಿ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸರ್ಕಾರದ ನಿಯಮದಂತೆ ನಿವೃತ್ತಿಯೊಂದಿಗೆ ಹೆಚ್ಚುವರಿ ಪಿಂಚಣಿ ಸೇರಿಸಿಕೊಡಬೇಕಿತ್ತು. ಆದರೆ ಮಹಾನಗರ ಪಾಲಿಕೆ ಅಧಿಕಾರಿಗಳು ಮಾಹಿತಿಯನ್ನು ಸರ್ಕಾರಕ್ಕೆ ನೀಡದ ಕಾರಣ, ನಿವೃತ್ತಿ ಮೊತ್ತ ಮತ್ತು ಮಾಸಿಕ ಪಿಂಚಣಿ, ಸರ್ಕಾರ ಘೋಷಿಸುವ ಉಪಾಂಶಗಳು ಕಡಿಮೆ ದೊರೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತರ ಇಲಾಖೆಯಲ್ಲಿ ಎಲ್ಲ ಹೆಚ್ಚುವರಿ ಸೇವೆ ಸಲ್ಲಿಸಿ ಕೊಡುತ್ತಿದ್ದು, ನಮಗೂ ನೀಡಬೇಕು. ಕಾಲ ಕಾಲಕ್ಕೆ ಹೆಚ್ಚುವರಿ ಸೇವೆ ಸೇರಿಸಿ ಕೊಡದೆ ಇರುವುದರಿಂದ ಪಿಂಚಣಿ ಮೊತ್ತಗಳು ವಂಚಿತರಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೆಲವರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹಲವರು ಮರಣ ಹೊಂದಿದ್ದಾರೆ. ವಯೋವೃದ್ಧರಾದ ನಮಗೆ ಜೀವನ ನಡೆಸುವುದು ಕಷ್ಟಕರವಾಗಿದೆ. ಕೂಡಲೇ ಹೆಚ್ಚುವರಿ ಸೇವೆ ಪರಿಗಣಿಸಿ, ಪಿಂಚಣಿ ಸೌಲಭ್ಯಗಳನ್ನು ಒದಗಿಸುವಂತೆ ಮಾಡಬೇಕು, ಸರ್ಕಾರ ಕೋರಿದ ಸೇವಾ ಮಾಹಿತಿ ಕಳುಹಿಸಬೇಕು, ಮಾಹಿತಿ ಕಳುಹಿಸಲು ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಮಹಾನಗರ ಪಾಲಿಕೆ ಮಹಾಪೌರ ವಿಶಾಲ ದರ್ಗಿ, ಆಯುಕ್ತ ಭುವನೇಶ ದೇವಿದಾಸ ಪಾಟೀಲ್ ಅವರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು. ನೌಕರರ ಸಂಘದ ಅಧ್ಯಕ್ಷ ವೀರಭದ್ರ ಸಿಂಪಿ, ಸಿದ್ರಾಮ ಕರಣಿಕ, ಅಕ್ರಮ ಅಹ್ಮದ್, ಶಿವಾಜಿ ಜಮಾದಾರ, ಸುಭಾಷ ದಿಗ್ಗಾಂವಕರ್, ರಿಯಾಜ್ ಅಹ್ಮದ್, ಬಸವರಾಜ ಕೋಳಕೂರ, ಕಲ್ಯಾಣಿ ಬಿರಾದಾರ, ಶಂಕರ, ಸಂಗಮೇಶ ಸ್ವಾಮಿ, ವಿಶ್ವನಾಥ ರೆಡ್ಡಿ, ಚಂದ್ರಕಾAತ ದುರ್ಗ, ಮಹ್ಮದ್ ಅನ್ಸಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net