ನೀರಿಗೆ ಬರ, ಸದಸ್ಯರಿಗೆ ಪ್ರವಾಸದ ವರ

0201 KLB 02
Published on

ಕಲಬುರಗಿ: ರಾಜ್ಯ ಸರ್ಕಾರ ಬರ ಪೀಡಿತ ಎಂದು ಘೋಷಿಸಿದ್ದು, ನಗರದಲ್ಲಿ ಬೇಸಿಗೆಯಲ್ಲಿ ನೀರಿನ ತೀವ್ರ ಬರ ಎದುರಾಗಲಿದೆ. ಶುದ್ಧ, ಸಮರ್ಪಕ ನೀರು ಪೂರೈಕೆ ಮಾಡಬೇಕು. ಅದಕ್ಕೆ ಸೂಕ್ತ ಸಿದ್ಧತೆ ಮುಂಜಾಗೃತವಾಗಿ ಕೈಗೊಳ್ಳಬೇಕು ಎಂಬ ಚರ್ಚೆ ಸುದೀರ್ಘವಾಗಿ ನಡೆಯಿತು.

ನಗರದ ಇಂದಿರಾ ಪುರಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಪಾಲಿಕೆಯ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಸದಸ್ಯ ರಿಯಾಜ್ ಅಹ್ಮದ್ ಸಿದ್ದಿ ಮಾತನಾಡಿ, ಬರ ಎದುರಿಸಲು ಅಧಿಕಾರಿಗಳು ದಾಖಲೆ, ಮಾಹಿತಿಯನ್ನು ಸಮರ್ಪಕವಾಗಿ ಸಿದ್ಧಪಡಿಸಿದ್ದೀರಿ. ಆದರೆ ವಾಸ್ತವದಲ್ಲಿ ಕಾರ್ಯವಾಗುತ್ತಿಲ್ಲ. ನೀರಿನ ಪೂರೈಕೆ ಇಲ್ಲ. ಎಲ್‌ಆ್ಯಂಡ್ ಟಿ, ಜಲಮಂಡಳಿ, ಪಾಲಿಕೆ ಮಧ್ಯೆ ಹೊಂದಾಣಿಕೆಯೇ ಇಲ್ಲ. ಸ್ಪಷ್ಟತೆಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅತ್ಯಂತ ಕಲುಷಿತ ನೀರು ಪೂರೈಸಲಾಗುತ್ತಿದೆ ಎಂದು ಗಲೀಜು ನೀರನ್ನು ಬಾಟಲಿ ಸಮೇತ ಪ್ರದರ್ಶಿಸಿ ಗಂಗಮ್ಮ ಮುನ್ನಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ಧ್ವನಿಗೂಡಿಸಿದ ಸದಸ್ಯೆ ಶಾಂತಾಬಾಯಿ ೮, ೧೦ ದಿನಕ್ಕೊಮ್ಮೆ ನೀರು ಬಿಟ್ಟರೇ ಹೇಗೆ ಎಂದು ಪ್ರಶ್ನಿಸಿದರು. ಎಲ್ಲರೂ ಎಲ್ ಆ್ಯಂಡ್ ಟಿ ಅಧಿಕಾರಿ ಕುಮಾರಸನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಲಮಂಡಳಿ ಅಧಿಕಾರಿ ಮಾತನಾಡಿ, ಭೀಮಾ ನದಿಯ ಸರಡಗಿ ಬ್ಯಾರೇಜ್‌ಗೆ ನಾರಾಯಣಪುರ ಜಲಾಶಯದಿಂದ ಎರಡು ಟಿಎಂಸಿ ಕಲಬುರಗಿ ನಗರಕ್ಕಾಗಿಯೇ ಬಿಡಬೇಕು ಎಂದು ವಿನಂತಿಸಿ, ಪತ್ರ ಬರೆಯಲಾಗಿದೆ. ಸದ್ಯ ಫೆಬ್ರವರಿ ೩೧ರವರೆಗೆ ಯಾವುದೇ ಸಮಸ್ಯೆ ಇಲ್ಲ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸಲೇಂದೇ ೭.೨ ಕೋಟಿ ರೂ. ಕ್ರಿಯಾಯೋಜನೆ ರೂಪಿಸಲಾಗಿದೆ. ಸರಡಗಿ ಬ್ಯಾರೇಜ್‌ನಲ್ಲಿ ಸದ್ಯ ೧.೪೬ ಕ್ಯೂಸೆಕ್ ನೀರಿದೆ. ಅಗತ್ಯವಿದ್ದರೆ ಟ್ಯಾಂಕರ್ ಮೂಲಕ ಪೂರೈಸಲಾಗುವುದು ಎಂದು ತಿಳಿಸಿದರು.
ಸಭೆ ಆರಂಭಕ್ಕೂ ಮುನ್ನವೇ ಸಾಜಿದ್ ಕಲ್ಯಾಣ್ ಪ್ರತಿಭಟಿಸಿ, ನಾಯಿ ಕಚ್ಚಿ ಗಾಯಗೊಂಡ ಬಾಲಕಿಗೆ ನೀಡಿದ್ದ ಭರವಸೆಯಿಂದ ಹಣ ನೀಡಬೇಕು ಎಂದು ಆಗ್ರಹಿಸಿ, ಮೇಯರ್ ಎದುರು ಕುಳಿತರು. ಭರವಸೆ ನಂತರ ತಮ್ಮ ಸ್ಥಾನಕ್ಕೆ ಮರಳಿದರು.
ಕೆಕೆಆರ್‌ಡಿಬಿ ಸ್ಥಾಪಿಸಿದ ಆರ್‌ಓ ಪ್ಲಾಂಟ್‌ಗಳ ನಿರ್ವಹಣೆ ಯಾರು ಮಾಡೋದು ಎಂಬುದಕ್ಕೆ ಅಧಿಕಾರಿ ಬಳಿ ಉತ್ತರವಿಲ್ಲವೆಂದರು. ಸೂಕ್ತ ನಿರ್ಧಾರ ಕೈಗೊಳ್ಳೋಣ ಎಂದು ನಿರ್ಧರಿಸಲಾಯಿತು.

ಹಾದಿ ತಪ್ಪಿದ ಹಣಕಾಸು ಚರ್ಚೆ: ಹಣಕಾಸು ವಿಭಾಗದ ಚರ್ಚೆ ಮುಖ್ಯ ಅಧಿಕಾರಿ ಗೈರಾಗಿದ್ದರಿಂದ ಉತ್ತರ ಕೊಡಲು ಕೆಳ ಹಂತದ ಅಧಿಕಾರಿ ವಿಫಲರಾಗಿದ್ದಕ್ಕೆ ಸದಸ್ಯ ಯಲ್ಲಪ್ಪ ನಾಯ್ಕೋಡಿ ಆಕ್ಷೇಪಿಸಿದರು. ಪ್ರತಿ ಬಾರಿ ಹೀಗೆ ಆಗುತ್ತಿದೆ. ತಯಾರಿ ಇಲ್ಲದಿದ್ದರೆ ಅಧಿಕಾರಿಗಳು ಇಲ್ಲಿಗೆ ಬರುವ ಅವಶ್ಯಕತೆ ಏನಿದೆ ಎಂದು ಕಿಡಿ ಕಾರಿದರು. ತಯಾರಿ ಮಾಡದೆ, ದಾಖಲೆ ಇಲ್ಲದರೆ ಬಂದ್ರೆ ಕಠಿಣ ಶಿಕ್ಷೆ ನೀಡುವೆ ಎಂದು ಆಯುಕ್ತ ಭುವನೇಶ ಪಾಟೀಲ್ ಸೂಚಿಸಿದರು.
ಉಪಮೇಯರ್ ಶಿವಾನಂದ ಪಿಸ್ತಿ, ವಿಶಾಲ ನವರಂಗ, ರಾಗಂ ಇನಾಂದಾರ್ ಇತರರಿದ್ದರು. ಪ್ರಹ್ಲಾದ್ ರಾವ ಕುಲ್ಕರ್ಣಿ ಸಭಾ ಕಾರ್ಯದರ್ಶಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net