

ಕಲಬುರಗಿ: ನಗರದ ಇಂದಿರಾ ಭವನದಲ್ಲಿ ಶುಕ್ರವಾರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕಾರ್ಮಿಕರ ನೇಮಕ ಗೊಂದಲದ ಕುರಿತು ಮಾತನಾಡುವಾಗ ಆಡಳಿತ ಪಕ್ಷದ ನಾಯಕ ಕೃಷ್ಣಾ ನಾಯಕ್ ಮುಸ್ಲಿಮ ಮಹಿಳೆಯರ ಬಗ್ಗೆ ಆಕ್ಷೇಪಕಾರಿ ಪದ ಬಳಸಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಕೆಲ ಆಕ್ರೋಶ ವ್ಯಕ್ತಪಡಿಸಿ, ದಿಕ್ಕಾರ ಕೂಗಿ, ಕುರ್ಚಿ ಎತ್ತಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಪೌರಕಾರ್ಮಿಕರು ತಮ್ಮ ಸೇವೆ ಕಾಯಂ ಮಾಡಲು ಆಗ್ರಹಿಸಿ ಹಲವು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಕಾಂಗ್ರೆಸ್‌ನ ಸೈಯದ್ ಅಹ್ಮದ್ ಅವರು ೬೯೭ ಪೌರಕಾರ್ಮಿಕರನ್ನು ನೇಮಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಒಟ್ಟು ೧೦೪೧ ಕಾರ್ಮಿಕರು ಪ್ರಸ್ತುತ ಕೆಲಸ ಮಾಡುತ್ತಿದ್ದಾರೆ ಎಲ್ಲರನ್ನೂ ಕಾಯಂ ಮಾಡಿದರೆ ಪ್ರತಿಭಟನೆಯ ಪ್ರಶ್ನೆಯೇ ಬರುವುದಿಲ್ಲ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಆಡಳಿತ ಪಕ್ಷದ ನಾಯಕ ಕೃಷ್ಣಾ ನಾಯಕ, ದಲಿತರು, ಬಂಜಾರ ಸಮುದಾಯದ ಮಹಿಳೆಯರು ಕಸ ಗುಡಿಸುವುದನ್ನು ಕಂಡಿದ್ದೇ ವೆ. ಆದರೆ, ಬುರ್ಖಾ ಹಾಕಿಕೊಂಡ ಮಹಿಳೆಯರು ಕಸ ಗುಡಿಸುವುದು ನೋಡಿದ್ದೀರಾ ಎಂದು ಪ್ರಶ್ನಿಸಿದರು.
ಈ ಮಾತಿಗೆ ಕೆರಳಿದ ಪ್ರತಿಪಕ್ಷ ನಾಯಕ ಅಜ್ಮಲ್ ಗೋಲಾ, ಹಿರಿಯ ಸದಸ್ಯ ಸೈಯದ್ ಅಹ್ಮದ್ ಸೇರಿ ಇತರ ಕಾಂಗ್ರೆಸ್ ಸದಸ್ಯರು ಮೇಯರ್ ಎದುರು ಬಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಅಯೂಬ್ ತಯ್ಯುಬ್‌ಖಾನ್ ಖುರ್ಚಿ ಎತ್ತಿ ಹಾಕಿ, ಕಿಡಿ ಕಾರಿದರು. ಅಜ್ಮಲ್ ಗೋಲಾ ಮೇಯರ್ ವಿಶಾಲ ದರ್ಗಿ ಎದುರಿನ ಮೇಜಿನ ಮೇಲೆ ಹತ್ತಿ ಕುಳಿತು ಪ್ರತಿಭಟನೆ ನಡೆಸಿದರು.
ಕೃಷ್ಣಾ ನಾಯಕರನ್ನು ಹೊರಗೆ ಕಳುಹಿಸಿ, ಬಹಿರಂಗ ಕ್ಷಮೆ ಕೇಳಿಸಿ ಎಂದು ಪಟ್ಟು ಹಿಡಿದರು. ಈ ವೇಳೆ ಗೊಂದಲಕ್ಕೀಡಾಗಿ, ಸಂಭಾಳಿಸಲು ಮುಂದಾದ ಮೇಯರ್ ದರ್ಗಿ, ಸಭೆಯನ್ನು ಕೆಲ ಕಾಲ ಮುಂದೂಡಿದರು. ಎರಡು ಪಕ್ಷದ ಮುಖಂಡರನ್ನು ಕರೆಸಿ, ಸಂಧಾನ ನಡೆಸಿದರು. ಸಭೆ ಮರಳಿ ಆರಂಭವಾದಾಗ ಕೃಷ್ಣಾ ನಾಯಕ್ ಕ್ಷಮೆ ಕೇಳುವಂತೆ ಸೂಚಿಸಿದರು. ಮೇಯರ್ ಸೂಚನೆಯಂತೆ ಕೃಷ್ಣಾ ನಾಯಕ್ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದರು.