ಮತ್ತಿನ ಔಷಧ ಸಾಗಣೆ, ಕಲಬುರಗಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಅರೆಸ್ಟ್​

lingaraj kanni (2)
Published on

ಕಲಬುರಗಿ: ನಿಷೇಧಿತ ಮತ್ತು ಬರಿಸುವ ಕೊಡೆನೈನ್​ ಸಿರಪ್​ ಸಾಗಣೆ ಮಾಡುತ್ತಿದ್ದ ವೇಳೆಯಲ್ಲಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಸೇರಿ ಕಲಬುರಗಿಯ ಇಬ್ಬರು ಒಳಗೊಂಡಂತೆ ಮೂವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಲಿಂಗರಾಜ ಆಲಗೂಡ (ಕಣ್ಣಿ) ಮತ್ತು ಇರ್ಫಾನ್​ ಇಬ್ರಾಹಿಂ ಬಂಧಿತರು. ಇಬ್ಬರು ಕಲಬುರಗಿಯವರು. ಅವರೊಂದಿಗೆ ಕಾರಿನ ಚಾಲಕನನ್ನು ಸಹ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಎಲ್ಲರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಆಧಾರಬಾಡ್​ ಜೈಲಿನಲ್ಲಿರಿಸಲಾಗಿದೆ.

ಮಾದಕ ವಸ್ತು ನಿಗ್ರಹ ಪಡೆಯವರು ಮುಂಬಯಿನ ಕಲ್ಯಾಣದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, ಕಲ್ಯಾಣದ ಬಾಕ್ರಿ ಮಂಡಿ ರಸ್ತೆಯಲ್ಲಿ ಕಾರಿನಲ್ಲಿ ಮಾದಕ ವಸ್ತು ಗುಣ ಹೊಂದಿರುವ ನಿಷೇಧಿತ ಕೆಮ್ಮಿನ ಔಷಧ ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ, 120 ಬಾಟಲ್​ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಎಂದು ಮಹಾರಾಷ್ಟ್ರ ಪೊಲೀಸ್​ ಮೂಲಗಳು ತಿಳಿಸಿವೆ.

ಲಿಂಗರಾಜ ಸೇರಿದಂತೆ ಮೂವರ ವಿರುದ್ಧ ಕಲ್ಯಾಣದ ಬಜಾರಪೇಟ ಠಾಣೆಯಲ್ಲಿ ಮಾದಕ ವಸ್ತು ಸಾಗಣೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವೈದ್ಯರ ಸಲಹಾ ಚೀಟಿ ಇಲ್ಲದೆ ಈ ಔಷಧ ನೀಡುವಂತಿಲ್ಲ. ಕೆಲವರು ಅದನ್ನು ನಶೆ ಮಾಡಿಕೊಳ್ಳಲು ಬಳಸುತ್ತಾರೆ. ಹೀಗಾಗಿ ಅದನ್ನು ನಿಷೇಧಿಸಲಾಗಿದೆ. ಹೀಗಿದ್ದರೂ ಅದನ್ನು ಮುಂಬಯಿಗೆ ಸಾಗಣೆ ಮಾಡಲಾಗುತ್ತಿತ್ತು ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net