

ಆಳಂದ: ದೇಶದ ಶ್ರೇಷ್ಠ ಸಂಪನ್ಮೂಲವಾಗಬೇಕಿದ್ದ ಯುವಕರು, ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಲಬುರಗಿ, ಬೀದರ್, ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್ ಕಳವಳ ವ್ಯಕ್ತಪಡಿಸಿದರು.
ಸಂಬುದ್ಧ ಪದವಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಎಲ್ಲ ಪದವೀಧರರಿಗೂ ಸರ್ಕಾರಿ ಉದ್ಯೋಗ ದೊರೆಯುವುದಿಲ್ಲ. ಹೀಗಾಗಿ ಯುವಕರು ಶಿಕ್ಷಣದ ಜತೆಗೆ ಕೌಶಲ ಬೆಳೆಸಿಕೊಳ್ಳಬೇಕು. ಕೃಷಿ, ಸ್ವಯಂ ಉದ್ಯೋಗ, ಹೊಸ ತಂತ್ರಜ್ಞಾನದಲ್ಲಿ ಕೌಶಲರಾದಾಗ ಮಾತ್ರ ಸ್ವಾವಲಂಬಿ ಜೀವನ ಸಾಧಿಸಲು ಸಾಧ್ಯ ಎಂದರು.
ಮಾದನಹಿಪ್ಪರಗಾದ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಬಸವಂತರಾವ ಪಾಟೀಲ್ ಮಾತನಾಡಿ, ಮೊಬೈಲ್‌ನ ಆಕರ್ಷಣೆಯಿಂದ ವಿದ್ಯಾರ್ಥಿಗಳ ಮನಸ್ಸು, ಏಕಾಗ್ರತೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪುಸ್ತಕ, ದಿನಪತ್ರಿಕೆ, ಕಾದಂಬರಿ ಹಾಗೂ ಸಾಧಕರ ಜೀವನ ಚರಿತ್ರೆ ಓದುವ ಹವ್ಯಾಸ ಬೆಳೆಸಿಕೊಂಡರೆ ನಿಮ್ಮನ್ನು ಸಾಧನಿಗೆ ಪ್ರೇರೆಪಿಸಲಿವೆ ಎಂದು ಹೇಳಿದರು.
ಆಡಳಿತ ಅಧಿಕಾರಿ ಮಹಾದೇವಪ್ಪ ಪಾಟೀಲ್, ನಿವೃತ್ತ ಮುಖ್ಯ ಶಿಕ್ಷಕ ಅಪ್ಪಾಸಾಹೇಬ್ ತೀರ್ಥೆ ಮಾತನಾಡಿದರು. ಪ್ರಾಂಶುಪಾಲ ಸಂಜಯ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಾಬುರಾವ ಚಿಕಣಿ, ಮಹಾದೇವಿ ಪಾಟೀಲ್, ಭೀಮಾಶಂಕರ ಅತನೂರೆ, ಮಹಾದೇವಿ ಮುನ್ನೋಳ್ಳಿ, ಧನರಾಜ ಪಾಟೀಲ್, ಸುರೇಶ ಪಾಟೀಲ್, ಹುಸೇನ್ ಶ್ರೀಚಂದ ಇತರರಿದ್ದರು. ಧಾನೇಶ್ವರಿ ಹಿರೇಮಠ ನಿರೂಪಣೆ ಮಾಡಿದರು. ಬಾಬುರಾವ ಚಿಕಣಿ ಸ್ವಾಗತಿಸಿದರು. ಶಿವಮ್ಮ ಹಣಮಶೆಟ್ಟಿ ವಂದಿಸಿದರು.