ಬಸರಾಳಿನಲ್ಲಿ ಕಾಲಭೈರವೇಶ್ವರ ಜಾತ್ರೆ ಸಂಭ್ರಮ: ಅಗ್ನಿಕೊಂಡೋತ್ಸವ ಕಣ್ತುಂಬಿಕೊಂಡ ಸಹಸ್ರಾರೂ ಭಕ್ತರು

Kalabhairaveshwara Fair Celebration
Published on

ಮಂಡ್ಯ: ತಾಲೂಕಿನ ಬಸರಾಳು ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಕಾಲಭೈರವೇಶ್ವರಸ್ವಾಮಿ ಹಬ್ಬ ಮತ್ತು ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ ಅಸಂಖ್ಯಾತ ಭಕ್ತರು ಸೋಮವಾರ ಮುಂಜಾನೆ ವಿಜೃಂಭಣೆಯಿಂದ ನಡೆದ ಕೊಂಡೋತ್ಸವವನ್ನು ಕಣ್ತುಂಬಿಕೊಂಡರು.

ಶನಿವಾರ ನಡೆದ ರಥೋತ್ಸವದ ನಂತರ ದೇವಾಲಯದಲ್ಲಿ ಹೂವಿನ ಚಪ್ಪರ ಹಾಗೂ ಇಡೀ ರಾತ್ರಿ ರಂಗ ಕುಣಿಯುವ ಕಲಾವಿದರು ತಮಟೆಯ ಸದ್ದಿಗೆ ರಂಗ ಕುಣಿತ ನಡೆಸಿದರು. ಭಾನುವಾರ ಸಂಪ್ರದಾಯದಂತೆ ಕಿಚ್ಚ ಮಾಸ್ತಿ ಉತ್ಸವ ಬಾಲಕನಿಗೆ ಹೆಣ್ಣಿನ ವೇಷ ತುಡಿಸಿ ದೇವಾಲಯ ಪ್ರದಕ್ಷಿಣೆ ಹಾಕಿಸಿ ಸ್ವಾಮಿಗೆ ಪೂಜೆ ನೆರವೇರಿಸಿ ಕೊಂಡಕ್ಕೆ ಗುದ್ದಲಿ ಸ್ಪರ್ಶ ಮಾಡಲಾಯಿತು. ನಂತರ ಭಕ್ತಾದಿಗಳು ಕಿಚ್ಚ ಮಾಸ್ತಿ ಉತ್ಸವ ಸೇವೆ ನಡೆಸಿದ ಬಾಲಕನಿಗೆ ಪಾದಪೂಜೆ ಸೇವೆ ನೆರವೇರಿಸಿ ಆಶೀರ್ವಾದ ಪಡೆದರು.

ನಂತರ ಕಾಲಭೈರವೇಶ್ವರ ಸ್ವಾಮಿಗೆ ಅಭಿಷೇಕ, ಹೋಮ ಸೇರಿದಂತೆ ಪೂಜೆ ಮಾಡಲಾಯಿತು. ಅಂತೆಯೇ ದೇವರ ಮೂರ್ತಿಯನ್ನು ವಿಶೇಷ ಬಗೆಯ ಹೂವುಗಳಿಂದ ಅಲಂಕರಿಸಲಾಯಿತು. ಹಬ್ಬದ ಅಂಗವಾಗಿ ದೇವಾಲಯವನ್ನ ಸಂಪೂರ್ಣವಾಗಿ ಹಣ್ಣು ಹಾಗೂ ಹೂವುಗಳಿಂದ ಶೃಂಗರಿಸಲಾಗಿತ್ತು. ಸಂಜೆ ಭಕ್ತ ಸಮೂಹ ಹಾಗೂ ಗ್ರಾಮಸ್ಥರು ಊರ ಹೂರವಲಯದಲ್ಲಿರುವ ಗಿಂಡಿ ಆಲದ ಮರದ ಬಳಿಗೆ ಮಂಗಳವಾದ್ಯ, ಛತ್ರಿ ಚಾಮರ, ತಮಟೆ, ಕೊಂಬು ಕಹಳೆ ಪರಿವಾರ ಸಮೇತ ಮೆರವಣಿಗೆ ತೆರಳಿದರು. ಬಳಿಕ ಆಲದ ಮರಕ್ಕೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ವಾಪಸ್ ಕಾಲಭೈರವೇಶ್ವರ ಸ್ವಾಮಿಯ 12 ಮಾರು ಉದ್ದದ ಕೊಂಡಕ್ಕೆ ಮೂರು ಪ್ರದಕ್ಷಿಣೆ ಹಾಕಲಾಯಿತು. ನಂತರ ತೈಲ ಬಳಸದೆ ಚಕಮಕಿ ಕಲ್ಲುಗಳ ಕಿಡಿಯಿಂದ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು.

ಅಗ್ನಿ ಸ್ಪರ್ಶದ ನಂತರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಈ ವೇಳೆ ತಂಬಿಟ್ಟಿನ ಆರತಿ, ಮಡೆ ಆರತಿ, ತುಪ್ಪದ ಆರತಿ ಸೇರಿದಂತೆ ವಿವಿಧ ಬಗೆಯ ಆರತಿ ಸೇವೆ ಸಲ್ಲಿಸಲಾಯಿತು. ಮಧ್ಯರಾತ್ರಿ 2ಗಂಟೆಗೆ ಕಾಲಭೈರವೇಶ್ವರ ಸ್ವಾಮಿಯ ನವಿಲು ವಾಹನ ಉತ್ಸವ, ಕಟ್ಟೆ ತಿಮ್ಮಪ್ಪನ ಗರುಡವಾಹನ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಾಡಲಾಯಿತು. ಕಳೆದ ಹತ್ತು ದಿನಗಳಿಂದ ಗ್ರಾಮದಲ್ಲಿ ಕಾಲಭೈರವೇಶ್ವರ ಸ್ವಾಮಿಯ ಚಂದ್ರಮಂಡಲ ವಾಹನ ಉತ್ಸವ, ಗರಿವಾಹನ ಉತ್ಸವ, ರಥೋತ್ಸವ ಸೇರಿದಂತೆ ನಿತ್ಯವೂ ವಿವಿಧ ಬಗೆಯ ಉತ್ಸವಗಳು ನೆರವೇರಿದವು.

Kalabhairaveshwara Fair Celebration Mandya

ಕಳೆದ 15 ದಿನದಿಂದ ನಿತ್ಯ ಒಪ್ಪತ್ತಿನ ಉಪವಾಸದೊಂದಿಗೆ ತಮ್ಮ ಮನೆಯಿಂದ ದೂರವಿದ್ದು, ದೇವಾಲಯದ ತೋಟದ ಮನೆಯಲ್ಲಿ ವಾಸವಿದ್ದ ಏಳು ಜನ ಗುಡ್ಡಪ್ಪಗಳು ಸೋಮವಾರ ಬೆಳಗಿನ ಜಾವ ಪ್ರಸಿದ್ಧ ಕಾಲಭೈರವೇಶ್ವರ ಸ್ವಾಮಿಯವರ ದೇವಸ್ಥಾನದ ಮುಂಭಾಗ ಇರುವ 12 ಮಾರು ಉದ್ದದ ಅಗ್ನಿಕೊಂಡ ಹಾಯ್ದರು. ಈ ವೇಳೆ ಭಕ್ತರ ಸಂಭ್ರಮ, ಜಯಘೋಷ ಮುಗಿಲು ಮುಟ್ಟಿತ್ತು. ಅಂತೆಯೇ ಕೊಂಡ ಹಾಯುವ ಮೂಲಕ ಜಾತ್ರೆಯನ್ನು ಸಂಪನ್ನಗೊಳಿಸಿದರು.

ಹಬ್ಬದ ಅಂಗವಾಗಿ ಭಾನುವಾರ ರಾತ್ರಿ ಬೆಂಗಳೂರಿನ ಸಾಂಸ್ಕೃತಿಕ ಕಲಾತಂಡದವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಹಾಗೂ ಗ್ರಾಮಸ್ಥರಿಗೆ ರಾಗಿಮುದ್ದೆ, ಅವರೆಕಾಳುಸಾರು, ಬೂಂದಿ ಪಾಯಸ ಪ್ರಸಾದ ನೀಡಲಾಯಿತು. ಕೊಂಡ ಹಾಯ್ದ ನಂತರ ಭಕ್ತರು ಸ್ವಾಮಿಯ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿ ಮುಡಿಸೇವೆ, ಮಂಡಕ್ಕಿ ಹರಳು ಹಾಕುವ ಸೇವೆ, ಮಡೆ ಆರತಿ ಸೇವೆ, ತುಂಬಿಟ್ಟಿನ ಆರತಿ ಸೇವೆ, ತುಪ್ಪದ ಆರತಿ ಸೇವೆ, ಬಾಯಿ ಬೀಗ ಸೇರಿದಂತೆ ವಿವಿಧ ಸೇವೆಗಳನ್ನ ಹರಕೆ ನೆರವೇರಿಸಿದರು.

ವಿಶೇಷವೆಂದರೆ ಜಾತ್ರೆಯಲ್ಲಿ ಹೋಬಳಿಯ 24 ಗ್ರಾಮದ ಜನರು ಭಾಗವಹಿಸಿ ತಮ್ಮದೇ ಆದ ಹಕ್ಕು ಕರ್ತವ್ಯ ನೆರವೇರಿಸಿದರು. ಮುನ್ನೂರು ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ಕಾಲಭೈರವೇಶ್ವರ ಸ್ವಾಮಿ ಜಾತ್ರೆಯಲ್ಲಿ 24 ಗ್ರಾಮದವರಿಗೆ ವಿವಿಧ ರೀತಿಯ ಹಕ್ಕು ಹಾಗೂ ಕರ್ತವ್ಯ ನೀಡಲಾಗಿದೆ. ಅದಕ್ಕೆ ತಕ್ಕಂತೆ ಗ್ರಾಮಸ್ಥರು ನಿಷ್ಟೆಯಿಂದ ಪಾಲನೆ ಮಾಡಿಕೊಂಡು ಬರುತ್ತಿದ್ದಾರೆ. ಇನ್ನು ಕೊಂಡೋತ್ಸವದ ನಂತರ ಕಾಲಭೈರವೇಶ್ವರ ರಥೋತ್ಸವ ಗ್ರಾಮದ ಪ್ರಮುಖ ಬೀದಿ ನಡೆಯಿತು. ಹಬ್ಬದ ಅಂಗವಾಗಿ ಗ್ರಾಮದ ಪ್ರಮುಖ ರಸ್ತೆ ಹಾಗೂ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಕೊಂಡ ಹಾಯ್ದ ಗುಡ್ಡಪ್ಪಗಳಿಗೆ ಭಕ್ತರು ಎಳನೀರು ನೀಡಿ ಆಶೀರ್ವಾದ ಪಡೆದರು. ಜಾತ್ರೆ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂಭಾಗದಲ್ಲಿರುವ ಬೃಹತ್ ಗರುಢಗಂಬದ ಮೇಲೆ ಇರುವ ದೀಪಕ್ಕೆ ಏಳು ದಿನ ನಿತ್ಯವೂ ದೀಪ ಹಚ್ಚಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net