

ಬೈಂದೂರು: ಕತ್ತಲೊಳಗಿನ ಬೆಳಕನ್ನು ನೋಡಲು ಅಂತರಂಗದ ಕಣ್ಣು ತೆರೆಯಬೇಕು. ಹಾಗೆಯೇ ಮೇಲ್ನೋಟಕ್ಕೆ ಭೀಕರನಂತೆ ಕಾಣುವ ಕಾಲಭೈರವ ಪರಿಪೂರ್ಣ ಜ್ಞಾನಿ. ಮನದೊಳಗಿನ ಅಜ್ಞಾನ ಹೊಡೆದೋಡಿಸುವ ಸುಜ್ಞಾನಿ. ಅಸೀಮ ಆನಂದದ ಪ್ರತೀಕ. ಈ ಹಿನ್ನೆಲೆಯಲ್ಲಿ ಕಾಲಭೈರವನ ಆರಾಧನೆ ಎಲ್ಲೆಡೆ ನಡೆಯುತ್ತದೆ ಎಂದು ಮಂಗಳೂರು ಮಹಾಸಂಸ್ಥಾನ ಕಾವೂರು ಶಾಖಾ ಮಠ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠಾಧೀಶ ಡಾ.ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಸೋಮವಾರ ಶ್ರೀ ಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಭೈರವ ದೇವಸ್ಥಾನದ ದ್ವೀತಿಯ ವರ್ಷದ ವರ್ಧಂತ್ಯುತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬೆಳಗ್ಗೆ ಕ್ಷೇತ್ರದ ತಂತ್ರಿ ನೀಲಾವರ ರಘುರಾಮ ಮಧ್ಯಸ್ಥರ ನೇತೃತ್ವದಲ್ಲಿ ಕ್ಷೇತ್ರದ ಜೋಯಿಸ ರಾಮಚಂದ್ರ ನಾವುಡ ತೆಂಕಬೆಟ್ಟು ಹಾಗೂ ಕ್ಷೇತ್ರ ಅರ್ಚಕರ ಸಹಕಾರದೊಂದಿಗೆ ಶ್ರೀ ಕಾಲಭೈರವ ದೇವರಿಗೆ ಅಷ್ಟೋತ್ತರ ಕಲಶ, ತತ್ವಹೋಮ, ಅಧಿವಾಸಹೋಮ, ವಿಶೇಷ ಪಂಚಾಮೃತಾಭಿಷೇಕ, ಕಲಶಾಭಿಷೇಕ, ಮಹಾಪೂಜೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ, ಗುರುಪಾದ ಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನೆ, ದೀಪೋತ್ಸವ, ದೇವರ ಉತ್ಸವ, ಮಹಾಪೂಜೆ ನಡೆಯಿತು.
ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ್ ಜೋಗಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಮಟ್ಟದ ಸಹಕಾರಿ ಹಾಗೂ ಹೈನುಗಾರಿಕೆ ಪ್ರಶಸ್ತಿ ಪುರಸ್ಕೃತ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಆರೋಗ್ಯ ನಿಧಿ ಮತ್ತು ವಿದ್ಯಾನಿಧಿ ವಿತರಿಸಲಾಯಿತು. ಸಾಹಿತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕರ ಯು.ಜೋಗಿ ಮಂಜೇಶ್ವರ, ನಿವೃತ್ತ ಯೋಧ ರಾಜೇಶ್ ಗಂಗೊಳ್ಳಿ, ಕಲಾವಿದ ಪ್ರಸಾದ್ ಜೋಗಿ, ಲೈನ್ಮನ್ ಶಿವರಾಮ ದೇವಾಡಿಗ, ಬಾಲ ಪ್ರತಿಭೆ ಪ್ರತೀಕ್ಷ, ಕಾರ್ತಿಕ್ ಜೋಗಿ ಮತ್ತು ದಾನಿಗಳಿಗೆ ಗೌರವಿಸಲಾಯಿತು.
ಟಿ.ದಿನೇಶ್ ನಾಗಪ್ಪಯ್ಯ ನಾವುಡ, ರಾಜೇಶ್ ಕಾರಂತ್, ಹರಿನಾಥ್ ಜೋಗಿ ಮಂಗಳೂರು, ಅಣ್ಣಪ್ಪ ಎಂ.ಜೋಗಿ, ಪಾಂಡುರಂಗ ಜೋಗಿ ಕೋಟೆಶ್ವರ, ಮಹೇಶ್ ಮುಂಡರಗಿ ಹುಬ್ಬಳ್ಳಿ ಟಿ.ಎನ್.ಉಪಸ್ಥಿತರಿದ್ದರು. ರಾಘವೇಂದ್ರ ಜೋಗಿ ಸ್ವಾಗತಿಸಿದರು. ಸುಬ್ರಹ್ಮಣ್ಯ ಜಿ.ಉಪ್ಪುಂದ ನಿರೂಪಿಸಿದರು.