

ಉಡುಪಿ: ಪ್ರಾಯೋಗಿಕ ಮಾದರಿಗಳು ಕೇವಲ ವಿಜ್ಞಾನ, ಗಣಕಯಂತ್ರ ಮತ್ತು ವಾಣಿಜ್ಯ ವಿಭಾಗಗಳಿಗೆ ಮಾತ್ರ ಸೀಮಿತವಾಗಿರದೆ, ಕಲಾ ಮತ್ತು ಭಾಷಾ ವಿಷಯಗಳಿಗೂ ಸಂಬಂಧಿಸಿದೆ. ಇಲ್ಲಿ ಸಮಾಜದಿಂದ ಪಡೆದುಕೊಳ್ಳುವ ಅನುಭವಗಳೇ ಪ್ರಾಯೋಗಿಕ ಮಾದರಿಗಳಾಗುತ್ತವೆ ಎಂದು ಉದ್ಯಮಿ ಮತ್ತು ಪೇಪರ್ ಕೊಲಾಜ್ ಕಲಾವಿದ ಪ್ರಭಾಕರ ಕಿಣಿ ಅಭಿಪ್ರಾಯಪಟ್ಟರು.
ಉಡುಪಿಯ ಅಜ್ಜರಕಾಡು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಐಕ್ಯುಎಸಿ ಮತ್ತು ಮಾನವಿಕ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಕಲಾ ಸಿರಿ-2024 ಅಂತರ್ ವಿಭಾಗೀಯ ಮಟ್ಟದ ಪ್ರಾಯೋಗಿಕ ಮಾದರಿಗಳ
ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಮಾನವಿಕ ವಿಷಯಗಳ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲಿನ ಕೌಶಲ, ಸೃಜನಶೀಲತೆ, ಪಾಲ್ಗೊಳುವಿಕೆ ಮತ್ತು ಅವರಿಗೊಂದು ವೇದಿಕೆ ಕಲ್ಪಸಿಕೊಡಲು ಇಂತಹ ಕಾರ್ಯಕ್ರಮ ಅಗತ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಐಕ್ಯುಎಸಿ ಸಂಚಾಲಕ ಸೋಜನ್ ಕೆ.ಜಿ., ಕಲಾನಿಕಾಯದ ಡೀನ್ ಪ್ರೊ. ನಿಕೇತನಾ, ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಡಾ. ವಾಣಿ ಆರ್. ಬಲ್ಲಾಳ್ ಉಪಸ್ಥಿತರಿದ್ದರು.
ಮಾನವಿಕ ಸಂಘದ ಸಂಚಾಲಕ ಡಾ. ಗುರುರಾಜ್ ಪ್ರಭು ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗಾನವಿ ವಂದಿಸಿದರು. ಚೈತ್ರಾ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು.