ಜ.11 ಮತ್ತು 12ರಂದು ಕದ್ರಿ ಉದ್ಯಾನವನದಲ್ಲಿ ಕಲಾ ಪರ್ಬ

Kala-parba-3-1024x683
Published on


ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ ಶರಧಿ ಪ್ರತಿಷ್ಠಾನದ ವತಿಯಿಂದ ಜ.11 ಮತ್ತು 12ರಂದು ನಗರದ ಕದ್ರಿ ಉದ್ಯಾನವನದಲ್ಲಿ ‘ಕಲಾ ಪರ್ಬ’ (ಚಿತ್ರ ಶಿಲ್ಪ ನೃತ್ಯ ಮೇಳ) ನಡೆಯಲಿದೆ.
ಕಲಾ ಪರ್ಬದಲ್ಲಿ 110ಕ್ಕೂ ಅಧಿಕ ಮಳಿಗೆಗಳು ಇರಲಿದ್ದು, ವೈವಿಧ್ಯಮಯ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಎರಡು ದಿನಗಳ ಕಾಲ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕಲಾಪರ್ಬ ನಡೆಯಲಿದೆ. ಜ.11ರಂದು ಬೆಳಗ್ಗೆ 10.30ಕ್ಕೆ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಕಲಾ ಪರ್ಬವನ್ನು ಉದ್ಘಾಟಿಸಲಿದ್ದಾರೆ ಎಂದು ಹಿರಿಯ ಚಿತ್ರ ಕಲಾವಿದ ಗಣೇಶ್ ಸೋಮಯಾಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಳಿಗೆಗಳನ್ನು ಶಾಸಕ ವೇದವ್ಯಾಸ ಕಾಮತ್, ಶಿಲ್ಪಕಲಾ ಪ್ರದರ್ಶನವನ್ನು ಶಾಸಕ ಭರತ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಂದು ಬೆಳಗ್ಗೆ 8.30ರಿಂದ 9.30ರವರೆಗೆ ಯೋಗ ಪ್ರದರ್ಶನ, ಅಂಕುಶ್ ನಾಯಕ್ ತಂಡದಿಂದ ಸಂಗೀತ ಪ್ರದರ್ಶನ, ಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆಗಳು ಇರಲಿವೆ. ಸಾಯಂಕಾಲ 4ಕ್ಕೆ ಯಲ್ಲಾಪುರದ ಮಂಚಿಕೆರೆ ಬಹುಮುಖಿ ಪ್ರತಿಭೆ ಪನ್ನಿಕಾ ಸಿದ್ದಿ ಮತ್ತು ತಂಡದಿಂದ ‘ಸಿದ್ದಿ ಢಮಾಮಿ’ ನೃತ್ಯ ಪ್ರದರ್ಶನ, ನೃತ್ಯಾಂಗಣ ತಂಡದಿಂದ ನೃತ್ಯ ಪ್ರದರ್ಶನ, ಭರತಾಂಜಲಿ ತಂಡದಿಂದ ನೃತ್ಯ ಪ್ರದರ್ಶನ, ಸನಾತನ ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದರು.
ಹಿರಿಯ ಕಲಾವಿದ ದಿನೇಶ್ ಹೊಳ್ಳ ಮಾತನಾಡಿ, ಜ.12ರಂದು ಸಾಯಂಕಾಲ 5ಕ್ಕೆ ಸಮಾರೋಪ ನಡೆಯಲಿದೆ. ಅಧ್ಯಕ್ಷತೆಯನ್ನು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಹಿಸಲಿದ್ದಾರೆ. ಬೆಳಗ್ಗೆ ಶಿಲ್ಪಕಲಾ ಪ್ರದರ್ಶನ ಹಾಗೂ ಪ್ಯಾತ್ಯಕ್ಷಿಕೆ, ಮಕ್ಕಳಿಗೆ ಚಿತ್ರಕಲಾ ಕಾರ್ಯಾಗಾರ, ಒಳಾಂಗಣ ವೇದಿಕೆಯಲ್ಲಿ ಮೇಕಪ್ ಮತ್ತು ಮೆಹಂದಿ ಸ್ಪರ್ಧೆ, ಗಾನನೃತ್ಯ ಅಕಾಡೆಮಿಯಿಂದ ನೃತ್ಯ ಪ್ರದರ್ಶನ, ಅರೆಹೊಳೆ ನಂದಗೋಕುಲ ಕಲಾತಂಡದವರಿಂದ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದರು.
ಶರಧಿ ಪ್ರತಿಷ್ಠಾನದ ಕಾರ್ಯದರ್ಶಿ ಪುನೀಕ್ ಶೆಟ್ಟಿ, ಪ್ರಸಾದ್ ಆರ್ಟ್ ಗ್ಯಾಲರಿಯ ಕೋಟಿ ಪ್ರಸಾದ್ ಆಳ್ವ, ಕಲಾವಿದೆ ಸ್ವಪ್ನಾ ನೊರೊನ್ಹಾ, ಉದ್ಯಮಿ ಡಿ.ರಮೇಶ್ ನಾಯಕ್, ಯೋಗ ಗುರು ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net