

ಮಡಿಕೇರಿ: ಸೌರಮಾನ ಕೊಡವ ಪಂಚಾಂಗದಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ೨೮ನೇ ವರ್ಷದ ಕಕ್ಕಡ ಪದ್‌ನೆಟ್‌ನ್ನು ಅರ್ಥಪೂರ್ಣವಾಗಿ ಆಚರಿಸಿತು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪರವರ ಅಧ್ಯಕ್ಷತೆಯಲ್ಲಿ ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖ ನಿರ್ಣಯಗಳನ್ನು ಮಂಡಿಸಲಾಯಿತು. ಕೊಡವ ಜನಾಂಗಕ್ಕೆ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಎಸ್‌ಟಿ ಟ್ಯಾಗ್ ಮತ್ತು ಕೋವಿ ಹಕ್ಕಿನ ಕುರಿತು ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಶಕ್ತಿಯ ರಿಟ್ ಅರ್ಜಿಯನ್ನು ಸಲ್ಲಿಸಿದ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರನ್ನು ಅಭಿನಂದಿಸಲು ಮತ್ತು ಸ್ವಾಮಿರವರ ಜನ್ಮದಿನದಂದು ಕೊಡವ ಸಮೂಹವನ್ನು ಜಾಗೃತಿಗೊಳಿಸಲು ಸುದೀರ್ಘ ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ,ಸ್ವಾಮಿ ಅವರ ಜನ್ಮದಿನವಾದ ಸೆ.೧೫ ರಂದು ಯೋಗಕ್ಷೇಮಕ್ಕಾಗಿ ತಲಕಾವೇರಿ ಹಾಗೂ ಪಾಡಿ ಶ್ರೀ ಇಗ್ಗತ್ತಪ್ಪ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ನಂತರ ಪಾದಯಾತ್ರೆ ಆರಂಭಗೊಳ್ಳಲಿದೆ. ರಾಜ್ಯದ ದಾಖಲೆಯಲ್ಲಿ ಜಾನಪದ ಕೊಡವ ನಾಮಕರಣದ ಪುನರುಜ್ಜೀವನಕ್ಕಾಗಿ ಸಿಎನ್‌ಸಿ ಹೆಮ್ಮೆ ವ್ಯಕ್ತಪಡಿಸಿತು. ಶಾಸ್ತ್ರೀಯ ಕೊಡವ ನಾಮಕರಣವು ಕೊಡವ ಹೆಗ್ಗುರುತನ್ನು ಮತ್ತು ಸ್ವಾಭಿಮಾನವನ್ನು ಗಟ್ಟಿಗೊಳಿಸುವುದಲ್ಲದೆ, ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವಯಂ ನಿರ್ಣಯ ಆಳ್ವಿಕೆ ಮತ್ತು ಕೊಡವ ಜನಾಂಗಕ್ಕೆ ಸಂಬಂಧಿಸಿದ ಎಲ್ಲಾ ೯ ಜನಾಂಗೀಯ ಹಕ್ಕುಗಳನ್ನು ನಿರ್ಧರಿಸುವ ಹೆಬ್ಬಾಗಿಲಾಗಿದೆ ಹೇಳಿದರು.
ಕೊಡವ ಎಂಬುದಾಗಿ ಶಾಸನ ಬದ್ಧವಾಗಿ ಸ್ಥಿರೀಕರಣಗೊಳಿಸಲು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ಸಮಯೋಚಿತ ಮಧ್ಯಸ್ಥಿಕೆಯೊಂದಿಗೆ ಸಿಎನ್‌ಸಿ ಕೊಡವ ನ್ಯಾಷನಲ್ ಕೌನ್ಸಿಲ್‌ನ ಸುದೀರ್ಘ ವರ್ಷಗಳ ಹಕ್ಕೊತ್ತಾಯದ ಮೇರೆಗೆ ಸಿದ್ದರಾಮಯ್ಯ ಸರ್ಕಾರ ಶಾಸನಬದ್ಧವಾಗಿ ಅಂಗೀಕರಿಸಿದೆ. ಇದನ್ನು ಕಾರ್ಯಗತಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಅಧಿಕೃತ ದಾಖಲೆಗಳ ಆಧಾರದ ಮೇಲೆ ನಿಜವಾದ ವರದಿಯನ್ನು ಸಲ್ಲಿಸಿದ ಅಂದಿನ ಹಿಂದುಳಿದ ಆಯೋಗಗಳ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, ಸಿಎನ್‌ಸಿ ಅಧ್ಯಕ್ಷರ ಪರ ವಾದಿಸಿದ ಬಲ್ಲಚಂಡ ಬೊಳ್ಳಿಯಪ್ಪ, ವಿಷಯವನ್ನು ಮುಂದುವರೆಸಿದ ಹಿಂದುಳಿದ ವರ್ಗಗಳ ಆಯೋಗದ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಕೊಡವರ ಪರ ಮಹತ್ವದ ತೀರ್ಪು ನೀಡಿದ ನ್ಯಾಯಮೂರ್ತಿ ಕೃಷ್ಣಾ ದೀಕ್ಷಿತ್, ಸಿಎನ್‌ಸಿ ಸ್ವಯಂಸೇವಕರು, ಒಡನಾಡಿಗಳು, ಹಿತೈಷಿಗಳು ಹಾಗೂ ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕಕ್ಕಡ ಆಚರಣೆ: ಕ್ಯಾಪಿಟಲ್ ವಿಲೇಜ್‌ನ ಗದ್ದೆಗಳಲ್ಲಿ ಸಸಿಗಳನ್ನು ನಾಟಿ ಮಾಡುವ ಮೊದಲು ಗಾಳಿಯಲ್ಲಿ ಏಳುಸುತ್ತು ಗುಂಡು ಹಾರಿಸಲಾಯಿತು. ಗ್ರಾಮದ ಮಂದ್‌ನಲ್ಲಿ ಧಾರ್ಮಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಂದೂಕು ಮತ್ತು ಭತ್ತದ ಸಸಿಗಳೊಂದಿಗೆ ಮೆರವಣಿಗೆಯು ಸಾಂಪ್ರದಾಯಿಕ ದುಡಿಕೊಟ್ಟ್‌ಪಾಟ್ ಮೂಲಕ ಭತ್ತದ ಗದ್ದೆಗೆ ಸಾಗಿತು. ಕೊಡವ, ಕೊಡವತಿಯರು ಸಿಎನ್‌ಸಿಯ ನ್ಯಾಯಸಮ್ಮತ ಸಾಂವಿಧಾನಿಕ ಬೇಡಿಕೆಗಳ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕಕ್ಕಡ ಹಬ್ಬದ ಕೊಡವ ಸಾಂಪ್ರದಾಯಿಕ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಸಿಎನ್‌ಸಿ ಪ್ರಮುಖರಾದ ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ ಕಾಳಪ್ಪ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಪಟ್ಟಮಾಡ ಲಲಿತಾ, ಬೊಪ್ಪಂಡ ಬೊಳ್ಳಮ ನಾಣಯ್ಯ, ಅರೆಯಡ ಸವಿತಾ ಗಿರೀಶ್, ಬೊಟ್ಟಂಗಡ ಸವಿತಾ ಗಿರೀಶ್, ಚೋಳಪಂಡ ಜ್ಯೋತಿ ನಾಣಯ್ಯ, ನಂದಿನೆರವಂಡ ನಿಶಾ ಅಚ್ಚಯ್ಯ, ನಂದೇಟಿರ ಕವಿತಾ ರವಿ, ಕೂಪದಿರ ಪುಷ್ಪ ಮುತ್ತಪ್ಪ, ಅಜ್ಜಿನಿಕಂಡ ಇನಿತಾ ಮಾಚಯ್ಯ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.