ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ’ಕಕ್ಕಡ ನಮ್ಮೆ’

'Kakkada Namme' from Karnataka Kodava Sahitya Academy
Published on

ಮಡಿಕೇರಿ:

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ಆ.೪ರಂದು ’ಕಕ್ಕಡ ನಮ್ಮೆ’ ಕಾರ್ಯಕ್ರಮ ಆಯೋಜಿಸಲಾಗಿದೆ. ಮಡಿಕೇರಿ ಕೊಡವ ಸಮಾಜ ಆವರಣದಲ್ಲಿ ಅಂದು ಬೆಳಗ್ಗೆ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ವಹಿಸಲಿದ್ದು, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ಖ್ಯಾತ ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ ಮತ್ತು ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ’ಕಕ್ಕಡ ತಿಂಗತ್‌ರ ನೈಪು, ಪೈಪು, ತೀನಿ’ ಎಂಬ ವಿಷಯದಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮದ್ ಪಾಯಿಸ, ತಾತೆ ತೊಪ್ಪು ಪಲ್ಯ, ಕುವಲೆ ಪುಟ್ಸ್ (ಚೆಕ್ಕೆರ), ಚೆಕ್ಕೆಕುರು ಪಜ್ಜಿ, ನಾಡ್ ಕೋಳಿ ಕರಿ, ಪಂದಿ ಕರಿ, ಇಂಡ್ ಕರಿ, ಬೈಂಬಳೆ ಕರಿ, ಕಾಡ್ ಮಾಂಗೆ ಕರಿ, ಬಾಳೆ ನುರ್‌ಕ್ ಸೇರಿದಂತೆ ಕಕ್ಕಡದ ವಿಶೇಷವಾದ ತಿಂಡಿಯ ಸ್ಪರ್ಧೆ ಮತ್ತು ಪ್ರದರ್ಶನ ಇರುತ್ತದೆ. ಅಕಾಡೆಮಿ ಪ್ರಕಟಿತ ಪುಸ್ತಕದ ಪ್ರದರ್ಶನ, ಮಾರಾಟ ಹಾಗೂ ಉರುಟಿಕೊಟ್ಟ್ ಆಟ್ ಸೇರಿದಂತೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮಹಿಳೆಯರಿಗೆ ಮಳಿಗೆಗಳನ್ನು ಹಾಕಲು ಕೂಡ ಅವಕಾಶ ಕೊಡಲಾಗುತ್ತದೆ. ಮಳಿಗೆ ಹಾಕಲು ಬಯಸುವವರು ಮತ್ತು ಕಕ್ಕಡ ಪೈಪೋಟಿಯಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಕಾರ್ಯಕ್ರಮದ ಸಂಚಾಲಕರಾದ ಕಂಬೆಯಂಡ ಡೀನಾ ಬೋಜಣ್ಣ ಮತ್ತು ಚೊಟ್ಟೆಯಂಡ ಎ. ಸಂಜು ಕಾವೇರಪ್ಪ ಅಥವಾ ಪೊಮ್ಮಕ್ಕಡ ಕೂಟದ ಆಡಳಿತ ಮಂಡಳಿ ಸದಸ್ಯರನ್ನು ಹಾಗೂ ಅಕಾಡೆಮಿ ಕಚೇರಿಯನ್ನು ಆ.೩ರ ಮಧ್ಯಾಹ್ನ ೧೨ ಗಂಟೆಯ ಒಳಗಾಗಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ೦೮೨೭೨-೨೨೯೦೭೪ ಅಥವಾ ೯೭೪೨೭೨೮೮೦೫ ನಂಬರ್‌ಗೆ ಕರೆ ಮಾಡಬಹುದಾಗಿದೆ.

ಅಕಾಡೆಮಿ ರಿಜಿಸ್ರ್ಟಾರ್ ಎ.ಸಿ. ಗಿರೀಶ್, ಪ್ರಮುಖರಾದ ಕನ್ನಂಡ ಕವಿತಾ ಬೊಳ್ಳಪ್ಪ, ಬೊಳ್ಳಜೀರ ಯಮುನಾ ಅಯ್ಯಪ್ಪ, ಕಂಬೆಯಂಡ ಡೀನಾ ಬೋಜಮ್ಮ, ಚೊಟ್ಟೆಯಂಡ ಸಂಜು ಕಾವೇರಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net