

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಹೊಸದಾಗಿ ಗೋಪುರ ಹಾಗೂ ಗೇಟ್ ನಿರ್ಮಿಸಲಾಗಿದೆ. ಕೊಡಗು ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಪುತ್ರರಾದ ರಕ್ಷಾ ರಾಮಯ್ಯ- ಸುಂದರ್ ರಾಮಯ್ಯ ಸಹೋದರರು ೧೩ ಲಕ್ಷ ರೂಪಾಯಿ ವಿನಿಯೋಗಿಸಿ ಗೋಪುರ, ಗೇಟ್ ನಿರ್ಮಿಸಿದ್ದಾರೆ.
ಸೀತಾರಾಮ್ ಆಪ್ತರಾಗಿರುವ ಕದ್ದಣಿಯಂಡ ಹರೀಶ್ ಬೋಪಣ್ಣ ಕೋರಿಕೆ ಮೇಲೆ ಕೊಡಗಿನ ಮಳೆ ದೇವರೆಂದು ಪ್ರಖ್ಯಾತಿ ಹೊಂದಿ ರುವ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಅಭಿವೃದ್ಧಿಗೆ ಸೀತಾರಾಮ್ ಪುತ್ರರು ಕೈಜೋಡಿಸಿದ್ದಾರೆ. ಸೀತಾರಾಮ್ ಉಸ್ತುವಾರಿ ಸಚಿವ ರಾಗಿದ್ದ ಸಂದರ್ಭದಲ್ಲಿ ದೇವಾಲಯ ಅಭಿವೃದ್ಧಿಗೆ ಕೈಜೋಡಿಸುವಂತೆ ಇಗ್ಗುತ್ತಪ್ಪ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಗಮನ ಸೆಳೆದಿದ್ದರು.
ದೇವಾಲಯಕ್ಕೆ ತೆರಳುವ ಮೆಟ್ಟಿಲು ಇರುವ ಸ್ಥಳದಲ್ಲಿ ಗೋಪುರ ನಿರ್ಮಿಸಲಾಗಿದೆ. ಗೋಪುರದ ಮೇಲೆ ಗಣಪತಿ, ಶಿವ, ಈಶ್ವರ ದೇವರ ಮೂರ್ತಿ ಇಡಲಾಗಿದೆ. ಮೆಟ್ಟಿಲು ಹತ್ತುವ ಸ್ಥಳದಲ್ಲಿ ಗೇಟ್ ನಿರ್ಮಿಸಲಾಗಿದೆ. ಇಗ್ಗುತ್ತಪ್ಪ ದೇವಾಲಯಕ್ಕೆ ಭಕ್ತರು ಮೆಟ್ಟಿಲು ಮೂಲಕ ಹೋಗಲು ಅವಕಾಶವಿಲ್ಲ. ವ್ಯಾಜ್ಯ, ವಿವಾದಕ್ಕೆ ಸಂಬಂಧಿಸಿದ್ದಂತೆ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಆಗಮಿಸುವವರು ಮಾತ್ರ ಪ್ರಮಾಣ ಮೆಟ್ಟಿಲು ಹತ್ತಿಹೋಗುತ್ತಾರೆ.
ಮುಜರಾಯಿ ಇಲಾಖೆಗೆ ಒಳಪಟ್ಟ ಈ ದೇವಾಲಯದ ಆಡಳಿತ ಮಂಡಳಿ ಜವಾಬ್ದಾರಿಯನ್ನು ಸರ್ಕಾರ ರಚಿಸುವ ವ್ಯವಸ್ಥಾಪನಾ ಸಮಿತಿ ಮಾಡುತ್ತದೆ. ದೇವಾಲಯದ ಆಚಾರ- ವಿಚಾರಕ್ಕೆ ಸಂಬಂಧಿಸಿದ ಜವಾಬ್ದಾರಿಯನ್ನು ೧೦೦ ವರ್ಷಗಳ ಇತಿಹಾಸ ಹೊಂದಿರುವ ಭಕ್ತಜನ ಸಂಘ ನಿರ್ವಹಿಸುತ್ತದೆ. ಮುಜರಾಯಿ ಇಲಾಖೆ ಹಾಗೂ ಭಕ್ತಜನಸಂಘಕ್ಕೆ ಸಂಬಂಧಿಸಿದ ಎರಡು ಭಂಡಾರ ಪಟ್ಟಿಗೆ ಈ ದೇವಾಲಯದಲ್ಲಿರುವುದು ವಿಶೇಷ.
ರಸ್ತೆ ಅಭಿವೃದ್ಧಿ
ಸೀತಾರಾಮ್ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ಮಲೆನಾಡು ಅಭಿವೃದ್ಧಿ ಮಂಡಳಿ ಮೂಲಕ ೩.೭೦ ಕೋಟಿ ರೂಪಾಯಿ ವೆಚ್ಚದಲ್ಲಿ ಕಕ್ಕಬ್ಬೆಯಿಂದ ಇಗ್ಗುತ್ತಪ್ಪ ದೇವಾಲಯದವರೆಗೆ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿತ್ತು. ಈ ಅನುದಾನ ತರುವಲ್ಲಿ ಹರೀಶ್ ಬೋಪಣ್ಣ
ಪರಿಶ್ರಮ ಹೆಚ್ಚಿತ್ತು.
ಕುಪ್ಪೇಂದ್ರ ರೆಡ್ಡಿ ನೆರವು
ರಾಜ್ಯಸಭೆ ಮಾಜಿ ಸದಸ್ಯ ಕುಪ್ಪೇಂದ್ರ ರೆಡ್ಡಿ ಇಗ್ಗುತ್ತಪ್ಪ ದೇವಾಲಯ ಅಭಿವೃದ್ಧಿಗೆ ರಾಜ್ಯಸಭೆ ಸದಸ್ಯರ ನಿಧಿಯಿಂದ ೨೦ ಲಕ್ಷ ಹಾಗೂ ವೈಯುಕ್ತಿಕವಾಗಿ ೮೦ ಲಕ್ಷ ರೂಪಾಯಿ ಒದಗಿಸಿದ್ದಾರೆ. ದೇವಾಲಯ ಮುಂಭಾಗದಲ್ಲಿ ಪೌಳಿ, ಶೌಚಾಲಯ ಸೇರಿದ್ದಂತೆ ವಿವಿಧ ಅಭಿವೃದ್ಧಿ ಕಾರ್ಯ ಮಾಡಲಾಗಿದೆ.
**
ಕಳೆದೊಂದು ದಶಕದಿಂದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿದೆ. ರಾಜ್ಯಸಭೆ ಮಾಜಿ ಸದಸ್ಯ ಕುಪ್ಪೇಂದ್ರ ರೆಡ್ಡಿ ದೇವಾಲಯ ಅಭಿವೃದ್ಧಿಗೆ ವೈಯುಕ್ತಿಕವಾಗಿ ೮೦ ಲಕ್ಷ ಹಾಗೂ ರಾಜ್ಯಸಭೆ ಸದಸ್ಯರ ನಿಧಿಯಿಂದ ೨೦ ಲಕ್ಷ ರೂ. ನೀಡಿ ದ್ದಾರೆ. ಮಾಜಿ ಸಚಿವ ಎಂ.ಆರ್. ಸೀತಾರಾಮ್ ಅವರ ಪುತ್ರರರು ಗೋಪುರ ಮತ್ತು ಗೇಟ್ ನಿರ್ಮಿಸಿಕೊಟ್ಟಿದ್ದಾರೆ. ಬಾಚಮಂಡ ಲವ ಚಿಣ್ಣಪ್ಪ, ಮಾಜಿ ಅಧ್ಯಕ್ಷರು, ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯ ವ್ಯವಸ್ಥಾಪನಾ ಸಮಿತಿ.
**
ರಕ್ಷಾ ರಾಮಯ್ಯ- ಸುಂದರ್ ರಾಮಯ್ಯ ಸಹೋದರರು ತನ್ನ ಮನವಿಗೆ ಸ್ಪಂದಿಸಿ ೧೩ ಲಕ್ಷ ರೂ. ವೆಚ್ಚದಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಗೋಪುರ- ಗೇಟ್ ನಿರ್ಮಿಸಿಕೊಟ್ಟಿದ್ದಾರೆ. ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಮಕ್ಕಿ ಶಾಸ್ತಾವು ದೇವಾಲಯಕ್ಕೆ ಸಂಬಂಧಿಸಿದ್ದಂತೆ ೧.೧೦ ಕೋಟಿ ರೂ. ಬಿಡುಗಡೆಯಾಗಿದೆ. ಅದೇ ರೀತಿ ಬಾಡಗರಕೇರಿ ಮೃತ್ಯುಂಜಯ ದೇವಾಲಯಕ್ಕೆ ಸಂಬಂಧಿಸಿದ್ದಂತೆ ೨೫ ಲಕ್ಷ ರೂ. ಕೇಳಲಾಗಿದೆ. ಹದ್ದಣಿಯಂಡ ಹರೀಶ್ ಬೋಪಣ್ಣ, ಉದ್ಯಮಿ, ಬೆಂಗಳೂರು.