

ಕಿಕ್ಕೇರಿ: ಹೋಬಳಿಯ ಗಡಿಯಂಚಿನ ಗ್ರಾಮವಾದ ಕಳ್ಳನಕೆರೆಗೆ ತನ್ನದೆ ಆದ ಐತಿಹ್ಯವಿದ್ದು, ಶಾಪಗ್ರಸ್ತ ಗ್ರಾಮದಂತಿದೆ.
ಬಲು ಹಿಂದೆ ಗ್ರಾಮದ ಹೊರವಲಯದಲ್ಲಿ ದೊಡ್ಡ ಕೆರೆ ಇತ್ತು. ಸುತ್ತಮುತ್ತಲಿನ ಪ್ರದೇಶದಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದ ಹಿನ್ನೆಲೆಯಲ್ಲಿ ಕೆರೆಯಂತಿದ್ದ ಹಳ್ಳಕ್ಕೆ ಏರಿ ಹಾಗೂ ಕೋಡಿ ನಿರ್ಮಿಸಲು ಸ್ಥಳೀಯರು ಮುಂದಾದರು. ತಿಂಗಳುಗಟ್ಟಲೇ ಶ್ರಮಿಸಿದ ಪರಿಣಾಮ ಕೋಡಿ ನಿರ್ಮಾಣವಾಯಿತು.
ಸ್ಥಳೀಯರು ಇದರಿಂದ ಸಂತಸದಲ್ಲಿರುವಾಗಲೇ ಕೆರೆ ಕೋಡಿ ಒಡೆಯಿತು. ಇದರಿಂದ ಬೇಸರಗೊಂಡ ಜನರು, ಕೆರೆ ಕಳ್ಳಬಿದ್ದಿದೆ ಎಂದು ಶಪಿಸಲು ಆರಂಭಿಸಿದರು. ಇದರ ನೆನಪಿನಾರ್ಥ ಗ್ರಾಮಕ್ಕೆ ಕಳ್ಳಗೆರೆ ನಂತರ ಕಳ್ಳನಕೆರೆ ಎಂದು ಕರೆಯಲಾಯಿತು ಎನ್ನುವುದು ಇಲ್ಲಿನ ಪೂರ್ವಿಕರ ಮಾತು.
ಕೋಡಿ ಒಡೆದು ಹೋಗುತ್ತಿದೆ ಎಂದು ಗ್ರಾಮಸ್ಥರು ಚಿಂತೆಯಲ್ಲಿರುವಾಗ ಅಂತಿಮವಾಗಿ ಕೆರೆ ಕೋಡಿ ಬಳಿ ಕಲ್ಲಿನ ಆಕಾರದಲ್ಲಿದ್ದ ವೀರಭದ್ರೇಶ್ವರನನ್ನು ಪ್ರಾರ್ಥಿಸಲು ಮುಂದಾದರು. ಆ ಬಳಿಕ ಕೋಡಿ ನಿರ್ಮಿಸಲಾಗಿ ಕೋಡಿ ಸುಭದ್ರವಾಯಿತು ಎನ್ನುವುದುಂಟು. ಈ ಕೆರೆ ಕುರುಹು ಕೂಡ ಇಲ್ಲವಾಗಿದ್ದು, ಈಗ ದೇಗುಲ ಮಾತ್ರವಿದೆ.
ದಟ್ಟ ಕಾನನದ ನಡುವೆ ಗೂಬೆಗುಡ್ಡ ಪ್ರದೇಶವಿದ್ದು, ಬಲು ಹಿಂದೆ ಕಳ್ಳಕಾಕರು ಈ ಹಳ್ಳಗುಡ್ಡದಲ್ಲಿ ಅವಿತುಕೊಳ್ಳುತ್ತಿದ್ದರು. ಅವರನ್ನು ಹಿಡಿದು ಇಲ್ಲಯೇ ಶಿಕ್ಷೆ ನೀಡಲಾಗುತ್ತಿತ್ತು. ಪರಿಣಾಮ ಈ ಪ್ರದೇಶವನ್ನು ಕಳ್ಳನಕೆರೆ ಎಂದೂ ಕೂಡ ಕರೆಯಲಾಗುತ್ತಿತ್ತು. ಅಲ್ಲೊಂದು ಇಲ್ಲೊಂದು ಇದ್ದ ಮನೆ ಒಂದೆಡೆಯಾಗಿ ಕಳ್ಳನಕೆರೆ ಗ್ರಾಮವಾಯಿತು. ಊರ ಜನರು ಗ್ರಾಮದ ಹೊರಗೆ ತೋಪಿನ ಉದ್ಭವ ವೀರಭದ್ರೇಶ್ವರಸ್ವಾಮಿ ಗುಡಿ ನಿರ್ಮಿಸಿದ್ದು, ದೇಗುಲದ ಮುಂದೆ ಸುಂದರವಾದ ಅರಳಿಕಟ್ಟೆ ಇದೆ. ಊರಿನಲ್ಲಿ ತಪ್ಪು-ಒಪ್ಪು, ಸಮಸ್ಯೆಗಳಾದಲ್ಲಿ ಈ ಕಟ್ಟೆಯಲ್ಲಿಯೇ ನ್ಯಾಯ ಪಂಚಾಯಿತಿ ನಡೆಯುತ್ತಿತ್ತು.
ಕೃಷಿ ಪ್ರಧಾನ ಗ್ರಾಮದಲ್ಲಿ ಸುಮಾರು ನೂರು ಒಕ್ಕಲುಗಳಿವೆ. ಒಕ್ಕಲಿಗ, ಅನುಸೂಚಿತ, ವಿಶ್ವಕರ್ಮ, ಕೊರಮ, ಮೇಧ ಸಮುದಾಯದವರು ವಾಸವಿದ್ದಾರೆ. ಜಿಲ್ಲೆಯಲ್ಲಿಯೇ ಪ್ರಥಮವಾಗಿ ಹೇಮಾವತಿ ನಾಲೆಯಿಂದ ಶೀತಪ್ರದೇಶವಾದ ಗ್ರಾಮ ಇದಾಗಿದೆ. ಹೀಗಾಗಿ ಇಲ್ಲಿ ನೆಲೆಸಲು ಕಷ್ಟವಾಗಿ ಹಲವರು ತಮ್ಮ ತೋಟದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಕಿಕ್ಕೇರಿ ಗ್ರಾಪಂ ವ್ಯಾಪ್ತಿಗೆ ಗ್ರಾಮ ಒಳಪಟ್ಟಿದ್ದು, ವಿದ್ಯುತ್ ಸಮಸ್ಯೆ ಸಾಕಷ್ಟಿದೆ. ಖಾಸಗಿ ಶಾಲೆಗಳ ಆರ್ಭಟಕ್ಕೆ ಗ್ರಾಮದಲ್ಲಿದ್ದ ಸರ್ಕಾರಿ ಪ್ರಾಥಮಿಕ ಶಾಲೆ ಮುಚ್ಚಲ್ಪಟ್ಟಿತ್ತು. ಕೋವಿಡ್ ವೇಳೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಮರು ಆರಂಭಿಸಿದರು. ಪ್ರಸ್ತುತ ಶಾಲೆಗೆ ಮಕ್ಕಳು ದಾಖಲಾಗುತ್ತಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಗ್ರಾಮದಲ್ಲಿ ನಾಲ್ಕೈದು ಬೀದಿಗಳಿದ್ದು, ಕೆಲವು ರಸ್ತೆಗಳಿಗೆ ಡಾಂಬರೀಕರಣ ಆಗಿದೆ. ಸೊಳ್ಳೇಪುರ ಹಾಗೂ ಬೂವಿನಹಳ್ಳಿ ಮಾರ್ಗದಿಂದ ಸಾಗುವ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಪರಿಣಾಮ ಈ ಮಾರ್ಗದಲ್ಲಿ ಸಂಚಾರ ಅಸಾಧ್ಯ.
ಶೀತಪ್ರದೇಶ ಗ್ರಾಮ: ಗ್ರಾಮಕ್ಕೆ 1983ರಲ್ಲಿ ಹೇಮಾವತಿ ನಾಲೆ ಸೌಲಭ್ಯ ಲಭಿಸಿತು. 52ನೇ ಡಿಸ್ಟ್ರಿಬ್ಯೂಟರ್ ನಂ. ಮೂಲಕ ದೊಡ್ಡ ನಾಲೆಯಿಂದ ನೀರು ಹರಿಯಲಾಗಿ ಇಡೀ ಊರಲ್ಲಿ ನೀರು ಚೆಲ್ಲಾಡುವಂತಾಯಿತು. ತಗ್ಗು ಪ್ರದೇಶವಾದ ಗ್ರಾಮದಲ್ಲಿ ಸದಾ ನೀರು ಜಿನುಗುವ ಮೂಲಕ ಜೌಗು ಪ್ರದೇಶವಾಯಿತು. ನಾಲ್ಕೈದು ಅಡಿ ಭೂಮಿ ಅಗೆದರೆ ನೀರು ಉಕ್ಕುವಂತಾಯಿತು. ಶೀತಪ್ರದೇಶದಿಂದ ಮನೆಗಳಲ್ಲಿ ವಾಸ ಮಾಡಲು ಕಷ್ಟವಾಗಿ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳಲು ಪ್ರಾರಂಭವಾಯಿತು. 1987ರಲ್ಲಿ ಶಾಸಕರಾಗಿದ್ದ ಕೃಷ್ಣ(ವಿಧಾನಸಭೆ ಸ್ಪೀಕರ್) ಅವರನ್ನು ಗ್ರಾಮಸ್ಥರು ಭೇಟಿ ಮಾಡಿ ಗ್ರಾಮ ಸ್ಥಳಾಂತರಕ್ಕೆ ಸರ್ಕಾರದಿಂದ ವ್ಯವಸ್ಥೆ ಮಾಡಲು ಆದೇಶ ಪಡೆದುಕೊಂಡರು. 1999ರಲ್ಲಿ ಈ ಆದೇಶ ರದ್ದಾಯಿತು. ನಂತರ ಅವಿರತವಾಗಿ ಗ್ರಾಮಸ್ಥರು ಹೋರಾಟ ಮಾಡಿದರು. ಸೂಕ್ತ ಪರಿಹಾರಕ್ಕೆ ನ್ಯಾಯಾಲಯದ ಮೆಟ್ಟಿಲು ಏರಿದರು. ಪರಿಣಾಮ ಸರ್ಕಾರದಿಂದ ಸೂಕ್ತ ಪರಿಹಾರ, ಗ್ರಾಮ ಸ್ಥಳಾಂತರ, ಸಂತ್ರಸ್ತರಿಗೆ ನಿವೇಶನ ನೀಡಲು ರೂಪುರೇಷೆ ಸಿಕ್ಕಿತು.
ಗ್ರಾಮದ ಹೊರವಲಯದಲ್ಲಿನ ಸರ್ವೇ ನಂ.39ರಲ್ಲಿ 8.10ಗುಂಟೆ ಸರ್ಕಾರಿ ಜಾಗ ಗುರುತಿಸಲಾಗಿದ್ದು, ಸಂತ್ರಸ್ತರಿಗೆ ಈ ಜಾಗದಲ್ಲಿ ಮನೆ ನಿರ್ಮಿಸಲು ನೆರವು ನೀಡುವ ಕೆಲಸ ತ್ವರಿತವಾಗಿ ಆಗಬೇಕಿದೆ. ಗ್ರಾಮದ ಮಕ್ಕಳಿಗೆ ಪ್ರೌಢಶಾಲೆ, ಕಾಲೇಜಿಗೆ ತೆರಳಲು, ಕೂಲಿ ಕಾರ್ಮಿಕರಿಗೆ ಸೂಕ್ತ ಸಾರಿಗೆ ಸೌಲಭ್ಯ ಆಗಬೇಕಿದೆ
ಕಿಕ್ಕೇರಿಯಿಂದ 4 ಕಿ.ಮೀ. ಅಂತರದಲ್ಲಿ ಗ್ರಾಮವಿದ್ದು, ಕಿಕ್ಕೇರಿಯಿಂದ ಕೋಡಿಮಾರನಹಳ್ಳಿ, ಕುಂದೂರು ಮಾರ್ಗದಲ್ಲಿ ಸಾಗುವಾಗ ಗೂಬೆಗುಡ್ಡ ತಿರುವಿನಲ್ಲಿ ಸಾಗಬೇಕಿದೆ. ಹೋಬಳಿ ಕೇಂದ್ರದಿಂದ ಖಾಸಗಿ ವಾಹನವನ್ನು ಇಲ್ಲಿನ ಜನರು ಅವಲಂಬಿಸಿದ್ದಾರೆ.
ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ, ಅಂಗನವಾಡಿ ಕೇಂದ್ರವಿದೆ. ವೀರಭದ್ರೇಶ್ವರ, ಮಾರಮ್ಮ, ಶನಿದೇವರ ದೇಗುಲವೂ ಇದೆ. ಗ್ರಾಮಸ್ಥರು ಒಟ್ಟಿಗೆ ಸೇರಿ ಯುಗಾದಿ, ಗೌರಿಹಬ್ಬ, ಮಾರಮ್ಮದೇವಿ ಹಬ್ಬ, ಕನ್ನಂಬಾಡಮ್ಮ ಹಬ್ಬ, ಮುನಿಯಪ್ಪನ ಹಬ್ಬ ಆಚರಿಸುತ್ತಾರೆ. ಶಿವರಾತ್ರಿ, ಕಾರ್ತಿಕಮಾಸದಲ್ಲಿ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ, ಅನ್ನಸಂತರ್ಪಣೆ ಮಾಡಲಾಗುತ್ತದೆ. ಕದ್ದುಮುಚ್ಚಿ ಮದ್ಯ ಮಾರಾಟ, ಜೂಜಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ತ್ವರಿತವಾಗಿ ಆಗಬೇಕಿದೆ ಎನ್ನುವುದು ಗ್ರಾಮಸ್ಥರ ಒತ್ತಾಯ.
ಹೇಮಾವತಿ ನಾಲೆಯಿಂದಾಗಿ ನಮ್ಮ ಗ್ರಾಮ ಶೀತಪೀಡಿತ ಪ್ರದೇಶವಾಗಿದೆ. ಎಲ್ಲ ಕಾಲದಲ್ಲಿಯೂ ಮನೆಗಳು ಶೀತಗೊಳಗಾಗಿ ಬೀಳುವ ಹಂತ ತಲುಪಿವೆ. ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ಗ್ರಾಮವನ್ನು ಸ್ಥಳಾಂತರ ಮಾಡುವ ಮೂಲಕ ಸಂತ್ರಸ್ತರಿಗೆ ಸರ್ಕಾರ ನಿವೇಶನ ನೀಡಬೇಕಿದೆ.
ಲಿಂಗರಾಜೇಗೌಡ ಹಿರಿಯ ಮುಖಂಡ, ಕಳ್ಳನಕೆರೆ
ಹೋಬಳಿಯ ಕಟ್ಟಕಡೆಯ ಗ್ರಾಮ ಇದಾಗಿದೆ. ಇಲ್ಲಿ ಸಮಸ್ಯೆ ಬೆಟ್ಟದಷ್ಟಿದೆ. ಸರ್ಕಾರ ಗ್ರಾಮವನ್ನು ಅಭಿವೃದ್ಧಿ ಪಡಿಸುವತ್ತ ಗಮನಹರಿಸಬೇಕಿದ್ದು, ಈ ಕೆಲಸ ಆಗದೆ ಗ್ರಾಮಾಭಿವೃದ್ಧಿಯಾಗಲಾರದು.
ಶಾರದಮ್ಮ ಹಿರಿಯರು, ಕಳ್ಳನಕೆರೆ