

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಪಡೆದಿರುವ 800 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಸರ್ವಧರ್ಮೀಯ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್‌ನ ಉರುಸ್ ಸಮಾರಂಭ ಸಮಾಪ್ತಿಗೊಂಡಿತು.
ಸಯ್ಯಿದ್ ಕುಂಬೋಳ್ ತಙಳ್, ಸಯ್ಯಿದ್ ಕೂರತ್ ತಙಳ್ ಮತ್ತು ಸಯ್ಯಿದ್ ಕಾಜೂರು ತಙಳ್ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆದ 10 ದಿನಗಳ ಕಾರ್ಯಕ್ರಮದಲ್ಲಿ ನಾಡಿನುದ್ದಗಲದಿಂದ, ಅನ್ಯ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಹಾಗೂ ಔಲಿಯಾ ಪ್ರೇಮಿಗಳು ಭಾಗವಹಿಸಿದ್ದರು.
ಕಾಜೂರು ಮತ್ತು ಕಿಲ್ಲೂರು ಜಮಾಅತ್ ಒಳಗೊಂಡ 50 ಮಂದಿಯ ಉರುಸ್ ಸಮಿತಿಯ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸ್ವಯಂಸೇವಕರಾಗಿ ಸೇವೆ ನೀಡಿದರು. ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದರು.
ಉರುಸ್ ಪ್ರಯುಕ್ತ ಮದನಿಯಂ ಮಜ್ಲಿಸ್, ದಿಕ್ರ್ ಮಜ್ಲಿಸ್, ಮಹಿಳಾ ಶರೀಅತ್ ಕಾಲೇಜು ‘ಅರ್ರಾಹಿಮಾ’ ಪದವಿ ಪ್ರದಾನ ಕಾರ್ಯಕ್ರಮ, ಬುರ್ದಾ ಮಜ್ಲಿಸ್ ಸುಂದರವಾಗಿ ಮೂಡಿಬಂತು. ಉರುಸ್‌ನ ಕೊನೆಯ ದಿನ ಸರ್ವ ಧರ್ಮೀಯ ಸೌಹಾರ್ದ ಸಮಾರಂಭ ಮತ್ತು ಸಮಾರೋಪ ಸಮಾರಂಭ ಜರುಗಿತು. ಕಾಜೂರು ತಂಙಳ್ ವಿಶೇಷ ಸಮಾರೋಪ ದುಆ ನೇತೃತ್ವ ನೀಡಿದರು.
ಉರುಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಕಾಜೂರು, ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ.ಎಚ್.ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜತೆ ಕಾರ್ಯದರ್ಶಿ ಶಾಹುಲ್ ಹಮೀದ್ ಕಿಲ್ಲೂರು, ಕೋಶಾಧಿಕಾರಿ ಕೆ.ಎಂ ಕಮಾಲ್ ಕಾಜೂರು ಸಹಿತ ಪದಾಧಿಕಾರಿಗಳು ತೊಡಗಿಸಿಕೊಂಡರು.
ವಿಶ್ವ ಶಾಂತಿಗಾಗಿ ಪ್ರತಿದಿನ ಔಲಿಯಾಗಳ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಉರುಸ್ ದಿನ ಖತ್ಮುಲ್ ಕುರ್‌ಆನ್ ಸಮರ್ಪಣೆ, ಬೆಲ್ಲದ ಗಂಜಿ ವಿತರಣೆ, ದಿಡುಪೆ ಯಂಗ್‌ಮೆನ್ಸ್ ನೇತೃತ್ವದಲ್ಲಿ ಹತ್ತೂ ದಿನ ತಂಪು ಪಾನೀಯ ವಿತರಣೆ ನಡೆಯಿತು. ಕಾರ್ಯಕ್ರಮದುದ್ದಕ್ಕೂ ಜಾತಿ, ಧರ್ಮ ಭೇದವಿಲ್ಲದೆ ಹಲವಾರು ಮಂದಿ ಭಕ್ತಿ-ಶ್ರದ್ಧೆಯಿಂದ ಭಾಗವಹಿಸಿದರು. ಉರುಸ್ ಪ್ರಯುಕ್ತ ಕಾಜೂರು ಪ್ರದೇಶವನ್ನು ವಿಶೇಷ ರೀತಿಯಲ್ಲಿ ಶೃಂಗರಿಸಲಾಗಿತ್ತು.