

ಕಳಸ: ಜಾನಪದ ಕಲೆಯನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಕಳಸ ಕನ್ನಡ ಜಾನಪದ ಪರಿಷತ್‌ನಿಂದ ನಡೆಸುತ್ತಿರುವ ನಮ್ಮ ನಡೆ ಜಾನಪದ ಕಲಾವಿದ ಮನೆ ಕಡೆ ಎಂಬ ಕಾರ್ಯಕ್ರಮ ಪ್ರಸಂಶನೀಯ ಎಂದು ಕಳಸ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ವಿನಯಕುಮಾರ್ ಶೆಟ್ಟಿ ಹೇಳಿದರು.
ಕಜಾಪದಿಂದ ವಿನಾಯಕ ಅಮಿತಾ ಅವರ ಮನೆಯಂಗಳದಲ್ಲಿ ಸೋಮವಾರ ನಡೆದ ನಮ್ಮ ನಡೆ ಜಾನಪದ ಕಲಾವಿದರ ಮನೆ ಕಡೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿ, ವಿನೂತನ ಕಾರ್ಯಕ್ರಮದಡಿ ಜಾನಪದ ಕಲೆಯನ್ನು ಮನೆ ಮನೆಗೂ ತಲುಪಿಸುವ ಕೆಲಸವಾಗುತ್ತಿದೆ. ಕಲಾವಿದರನ್ನು ಗುರುತಿಸಿ ಅವರ ಮನೆಯಲ್ಲಿಯೇ ಗೌರವ ಸಲ್ಲಿಸುವುದರಿಂದ ಜಾನಪದ ಕಲಾವಿದರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿದರು.
ಕಜಾಪ ಜಿಲ್ಲಾ ಉಪಾಧ್ಯಕ್ಷೆ ಸುಜಯಾ ಸದಾನಂದ ಮಾತನಾಡಿ, ಮಲೆನಾಡಿನ ಅಳಿವಿನಂಚಿನಲ್ಲಿರುವ ಅಂಟಿಕೆ ಪಿಂಟಿಕೆ ಕಲೆಯನ್ನು ಉಳಿಸಲು ಜಾನಪದ ಪರಿಷತ್ ಕಲಾವಿದರಿಗೆ ಉತ್ತೇಜನ ಕೊಡುವುದರ ಜತೆಗೆ ಹೊಸ ಪೀಳಿಗೆಗೆ ಕಲೆ ಪರಿಚಯಿಸಬೇಕು ಎಂದು ಹೇಳಿದರು.
ಅಂಟಿಕೆ ಪಿಂಟಿಕೆ ಕಲಾವಿದರಾದ ತಮ್ಮಣ್ಣ, ಜನಾರ್ದನ, ಕೃಷ್ಣಪ್ಪ ಹಾಗೂ 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತೀಕ್ಷಾ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸ್ವಾತಿ ಅವರನ್ನು ಕಜಾಪದಿಂದ ಗೌರವಿಸಲಾಯಿತು.
ಕಜಾಪ ತಾಲೂಕು ಅಧ್ಯಕ್ಷ ಅಜಿತ್, ಕಾರ್ಯದರ್ಶಿ ಭರತ್, ಉಪಾಧ್ಯಕ್ಷ ವಿನಾಯಕ, ಸಾತ್ವಿಕ್, ಪ್ರಭಾಮನಿ, ಅಮಿತಾ, ಮಂಜುಳಾ, ಅಂಕಿತಾ ಅರುಷ್, ಕಲ್ಪನಾ, ವಿಜಯ, ಡಾ. ಶಶಾಂಕ್, ಪ್ರೇಮ್‌ಕುಮಾರ್, ಭಾಸ್ಕರ್ ಇತರರಿದ್ದರು.