ಹಸಿರ ವನದೊಳಗೆ ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಶಾಲೆ ತರಗತಿ

Kaiyoor collage
Published on

ಶ್ರವಣ್‌ಕುಮಾರ್ ನಾಳ ಪುತ್ತೂರು
ಮಳೆಗಾಲ ಮುಗಿದ ಬಳಿಕ ಬೇಸಿಗೆಯ ಬಿಸಿಯಲ್ಲಿ ಶಾಲೆಯಲ್ಲಿ ಮಕ್ಕಳು ಪಾಠ ಕೇಳೋದು ತ್ರಾಸ. ಸರ್ಕಾರಿ, ಖಾಸಗಿ ಸೇರಿದಂತೆ ಬಹುತೇಕ ಎಲ್ಲ ಶಾಲೆಗಳೂ ಕಾಂಕ್ರೀಟ್ ಕಟ್ಟಡಗಳೇ ಆಗಿದ್ದು, ಬೇಸಿಗೆಯಲ್ಲಿ ಶಾಲೆ ತರಗತಿಗಳು ಬಿಸಿ ಬಿಸಿ. ಆದರೆ ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ನ ತರಗತಿ ಮಾತ್ರ ಹಸಿರ ವನದೊಳಗೆ ಶೃಂಗರಿಸಿದಂತಿದೆ. ಬೇಸಿಗೆಯಿರಲಿ ಮಳೆಯಿರಲಿ, ಇಲ್ಲಿನ ತರಗತಿಗಳು ಕೂಲ್ ಕೂಲ್!

ಕಾರಣ, ಇಲ್ಲಿನ ಗಿಡಗಳ ಬಳ್ಳಿಗಳಿಂದಲೇ ಮುಚ್ಚಲ್ಪಟ್ಟ ಹಸಿರು ಹೊದಿಕೆಯ ರಂಗಮಂಟಪ ತರಗತಿಗಳು...

ಇಲ್ಲಿ ಮಕ್ಕಳಿಗೆ ಮಾತ್ರ ಬಿಸಿಲಿನ ತಲೆಬಿಸಿಯಿಲ್ಲ. ಈ ಶಾಲೆಯಲ್ಲಿ ಗಿಡಗಳ ಬಳ್ಳಿಗಳಿಂದಲೇ ಮುಚ್ಚಲ್ಪಟ್ಟ ಹಸಿರು ಹೊದಿಕೆಯ ರಂಗಮಂಟಪವೊಂದಿದ್ದು, ದಿನಕ್ಕೆ ಒಂದೆರಡು ಗಂಟೆ ಇದೇ ಹಸಿರ ಹೊದಿಕೆಯಲ್ಲಿ ಕೂಲ್ ಆಗಿ ತರಗತಿ ಕೇಳುವ ವ್ಯವಸ್ಥೆ ಈ ಶಾಲೆಯಲ್ಲಿದೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ನಡೆಸಲು ಕೊಠಡಿಗಳ ಸಮಸ್ಯೆ ಎದುರಾದಾಗ ಸ್ಥಳೀಯ ಕೃಷಿಕರ ಸಹಾಯದಿಂದ ತೆಂಗಿನ ಹಾಗೂ ಅಡಕೆ ಗರಿಗಳನ್ನು ಬಳಸಿ ಕ್ಲಾಸ್‌ರೂಂ ನಿರ್ಮಿಸುವ ಮೂಲಕ ಈ ಶಾಲೆ ಎಲ್ಲರ ಗಮನ ಸೆಳೆದಿತ್ತು. ಮಕ್ಕಳ ಮನೋರಂಜನಾ ಕಾರ್ಯಕ್ರಮಗಳಿಗಾಗಿ ನಿರ್ಮಿಸಲಾಗಿರುವ ರಂಗಮಂಟಪದಲ್ಲೂ ಈ ಶಾಲೆಯ ಮಕ್ಕಳಿಗೆ ತರಗತಿಯನ್ನು ಕೇಳುವ ಅವಕಾಶವನ್ನು ಕಲ್ಪಿಸಲಾಗಿದೆ.
ಇತರ ಶಾಲೆಗಳ ರಂಗಮಂದಿರಗಳಿಗಿಂತ ವಿಭಿನ್ನವಾಗಿರುವ ಈ ರಂಗಮಂದಿರದ ಮೇಲ್ಫಾವಣಿ ಸಂಪೂರ್ಣ ಹಸಿರ ಬಳ್ಳಿಗಳಿಂದಲೇ ತುಂಬಿದ್ದು, ಬೇಸಿಗೆಯಲ್ಲಿ ತಂಪಗೆಯ ವಾತಾವರಣವನ್ನು ಸೃಷ್ಟಿಸುತ್ತದೆ. ಈ ಕಾರಣಕ್ಕಾಗಿಯೇ ಈ ಶಾಲೆಯ ಪ್ರತಿ ತರಗತಿಯ ಮಕ್ಕಳಿಗೂ ದಿನಕ್ಕೆ ಒಂದೋ, ಎರಡೋ ಗಂಟೆಗಳ ಕಾಲ ಇದೇ ಹಸಿರು ಹೊದಿಕೆಯ ರಂಗಮಂಟಪದಲ್ಲಿ ಪಾಠ ಮಾಡಲಾಗುತ್ತದೆ.

ಬಳ್ಳಿಗಳಿಂದ ಆವೃತ್ತವಾದ ಮಂಟಪ: ನಾಲ್ಕು ವರ್ಷಗಳ ಹಿಂದೆ ಈ ಮಂಟಪವನ್ನು ಹಸಿರ ಹೊದಿಕೆಯ ಮೇಲ್ಫಾವಣಿಯನ್ನಾಗಿ ರೂಪಿಸಬೇಕು ಎನ್ನುವ ಉದ್ದೇಶದಿಂದಲೂ ಈ ಶಾಲೆಯ ಸಿಬ್ಬಂದಿ ನಾಲ್ಕು ವಿದಧ ಬಳ್ಳಿಗಳನ್ನು ನೆಟ್ಟಿದ್ದಾರೆ. ಫ್ಯಾಷನ್‌ಪ್ರೂಟ್, ಡೆನ್ ಬರ್ಜಿಯಾ, ಗ್ರ್ಯಾಂಡಿ ಫ್ರೋರಾ ಬಳ್ಳಿಗಳನ್ನು ಈ ಮೇಲ್ಫಾವಣಿಗೆ ಬಿಡಲಾಗಿದೆ. ನಾಲ್ಕು ವರ್ಷದ ಅವಧಿಯಲ್ಲಿ ಅತ್ಯಂತ ಸಮೃದ್ಧವಾಗಿ ಬೆಳೆದು ಮೇಲ್ಫಾವಣಿ ತುಂಬಾ ಆವರಿಸಿಕೊಂಡಿರುವ ಈ ಬಳ್ಳಿಗಳು ಹಲವು ರೀತಿಯ ಪಕ್ಷಿಗಳಿಗೂ ವಾಸಸ್ಥಾನ. ಪ್ರತಿದಿನವೂ ಹನಿ ನೀರಾವರಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ಶಾಲೆಯ ಮಕ್ಕಳೇ ಈ ಗಿಡಗಳನ್ನು ಪೋಷಿಸಿ, ಸಂರಕ್ಷಿಸುತ್ತಿದ್ದಾರೆ.

ಗಿಡಗಳ ಬಳ್ಳಿಗಳಿಂದಲೇ ಮುಚ್ಚಲ್ಪಟ್ಟ ಹಸಿರು ಹೊದಿಕೆಯ ರಂಗಮಂಟಪ ತರಗತಿಗಳು ವಿದ್ಯಾರ್ಥಿಗಳಿಗೆ ಬಲು ಅಚ್ಚುಮೆಚ್ಚು. ಸಾರ್ವಜನಿಕರೂ ತಮ್ಮ ಕೈಲಾದ ಸಹಾಯ ಮಾಡಿ ಶಾಲೆಯನ್ನು ಹಸಿರ ಶಾಲೆಯನ್ನಾಗಿ ಮಾಡಲು ಮುಂದಾಗಿದ್ದಾರೆ. ಈ ಗಿಡ ಬಳ್ಳಿಗಳನ್ನು ರಂಗಮಂಟಪದ ಮೇಲ್ಫಾವಣಿಗೆ ಹಾಕಿದ ಬಳಿಕ ರಂಗಮಂಟಪದಲ್ಲಿ ನಡೆಯುವ ಪ್ರತಿ ಸಭೆ- ಸಮಾರಂಭಗಳಿಗೆ ಹಾಕಲಾಗುವ ಶಾಮಿಯಾನಗಳಿಗೆ ನೀಡಬೇಕಾದ ಹಣವನ್ನೂ ಉಳಿತಾಯವಾಗಿದೆ.
-ವಿನೋದ್ ಕುಮಾರ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net