

ಚಿಕ್ಕಬಳ್ಳಾಪುರ: ಕರ್ನಾಟಕದ ಕಾಶಿ ಪುಣ್ಯಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ಮಠದಲ್ಲಿ ಜು.1 ರಿಂದ ಜು.3 ರವರೆಗೆ ಗುರು ಪೂಜಾ ಮತ್ತು ಸಂಗೀತೋತ್ಸವ ನಡೆಯಲಿದ್ದು ಪ್ರತಿ ವರ್ಷದಂತೆ ಭರ್ಜರಿ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
ರಾಷ್ಟ್ರ ಮಟ್ಟದ ಖ್ಯಾತ ಸಂಗೀತ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರು ಮತ್ತು ಸಹಸ್ರಾರು ಭಜನಾ ತಂಡಗಳು ನಾದೋಪಾಸನೆಯಲ್ಲಿ ಭಾಗವಹಿಸಿ, ನಿರಂತರ 72 ಗಂಟೆ ಕಾಲ ಸಂಗೀತ ಸೇವೆಯನ್ನು ಸದ್ಗುರು ತಾತಯ್ಯನವರಿಗೆ ಸಮರ್ಪಿಸಲಿದ್ದಾರೆ. ಇದರಲ್ಲಿ ರಾಜ್ಯ ಮಾತ್ರವಲ್ಲದೇ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ವಿವಿಧ ಕಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.
ಪ್ರತಿನಿತ್ಯ ಸಂಗೀತ, ನಾದಸ್ವರ-ತವಿಲ್ ವಾದನ, ಭರತನಾಟ್ಯ, ಹರಿಕಥೆ, ಬರ‍್ರಕಥೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಮತ್ತು ಆಧ್ಯಾತ್ಮಿಕ ಚಟುವಟಕೆ ನಡೆಯಲಿದೆ. ಈಗಾಗಲೇ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ.
ಜು.1 ರಂದು ಬೆಳಿಗ್ಗೆ 6 ಗಂಟೆಗೆ ಸದ್ಗುರು ಮೂರ್ತಿಯನ್ನು ಸಭಾಂಗಣಕ್ಕೆ ತಂದು ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ. ಧರ್ಮಾಧಿಕಾರಿಗಳ ನೇತೃತ್ವದಲ್ಲಿ ಸಾಮೂಹಿಕ ನಾಮ ಸಂಕೀರ್ತನೆ ಗಾಯನದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.