

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿ ನಾರೇಯಣ ಮಠದಲ್ಲಿ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯು ವಿಜೃಂಭಣೆಯಿಂದ ನೆರವೇರಿತು. ಘಂಟನಾದ, ಸುಪ್ರಭಾತ ಹಾಗೂ ಗೋಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಭಾ ಮಂಟಪವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಇಲ್ಲಿಗೆ ತಾತಯ್ಯನವರ ಉತ್ಸವ ವಿಗ್ರಹವನ್ನು ದೇವಾಲಯದಿಂದ ಪಲ್ಲಕ್ಕಿಯಲ್ಲಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ಬಳಿಕ ಲಕ್ಷ್ಮೀ ಅಮ್ಮನವರ ವಿಗ್ರಹವನ್ನು ಪ್ರತಿಷ್ಠಾಪಿಸಿ, ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ಸಾವಿರಾರು ಮುತ್ತೆದೆಯರಿಂದ ವರಮಹಾ ಲಕ್ಷ್ಮೀ ಪೂಜೆ ನಡೆಯಿತು.
ಅರ್ಚಕ ವೃಂದದವರು ಲಕ್ಷ್ಮೀ ಅಷ್ಟೋತ್ತರವನ್ನು ಹೇಳುತ್ತಿದ್ದರೆ, ಭಕ್ತರು ಕುಂಕುಮಾರ್ಚನೆ ಮಾಡಿದರು. ನಂತರ ಅಷ್ಟಾವಾಧಾನ ಸೇವೆಯನ್ನು ಸಲ್ಲಿಸಿ ಮಹಾಮಂಗಳಾರತಿಯನ್ನು ಬೆಳಗಲಾಯಿತು. ಧರ್ಮಾಧಿಕಾರಿಗಳಾದ ಎಂ.ಆರ್.ಜಯರಾಮ್ ದಂಪತಿಗಳು ಪೂಜೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸದ್ಗುರು ತಾತಯ್ಯನವರು ರಚಿಸಿರುವ ಶ್ರೀರಾಮತಾರಕ ಮಂತ್ರವನ್ನು ಸಾಮೂಹಿಕವಾಗಿ ಪಠಿಲಾಸಯಿತು. ಭಕ್ತರಿಗೆ ಮಠದಿಂದ ಪ್ರಸಾದ ವಿತರಿಸಲಾಯಿತು.