

ಮಂಡ್ಯ: ಯೋಗಿನಾರೇಯಣ ಯತೀಂದ್ರ(ಕೈವಾರ ತಾತಯ್ಯ) ಎಲ್ಲ ವರ್ಗದವರನ್ನು ಸಮಾನವಾಗಿ ಪ್ರೀತಿಸುತ್ತಿದ್ದರು. ಪ್ರತಿಯೊಬ್ಬರು ಸಂತೋಷದಿಂದ ಬದುಕಬೇಕೆಂಬ ಮನೋಭಾವ ಹೊಂದಿದ್ದರು. ಅವರ ತತ್ವ ಮತ್ತು ಆದರ್ಶವನ್ನು ರೂಡಿಸಿಕೊಳ್ಳೋಣ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಯೋಗಿನಾರೇಯಣ ಯತೀಂದ್ರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಯೋಗಿನಾರೇಯಣ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಮನುಕುಲಕ್ಕೆ ಅನೇಕ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಜಾತಿ, ಮತಗಳ ಕುಲಗೋತ್ರಗಳ ವರ್ಣಭೇದವನ್ನು ಖಂಡಿಸುತ್ತಾ ದೀನ-ದಲಿತರ-ಶೋಷಿತರ ಉದ್ಧಾರಕ್ಕಾಗಿ ವಿಶ್ವಮಾನವ ಸಂದೇಶ ಸಾರಿದ ನಾರೇಯಣ ಯತೀಂದ್ರ ಅವರ ಜಯಂತಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಮಹಾನ್ ನಾಯಕರ ಆದರ್ಶ ಗುಣಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಬಾಸುದೇವ ಸೋಮಾನಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಟಿ.ರಮೇಶ್ ಮಾತನಾಡಿದರು. ಸರ್ವ ಬಣಜಿಗರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಮೋಹನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪ್ರಶಾಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ, ಸಂಘದ ಉಪಾಧ್ಯಕ್ಷ ಜಗದೀಶ್, ಖಚಾಂಚಿ ಸ್ವರ್ಣಕುಮಾರ್, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.