ಕೈಲ್‌ಪೋದ್ ಒತ್ತೋರ್ಮೆ ಕೂಟ

Kailpod meeting
Published on

ವಿರಾಜಪೇಟೆ:

ಕೊಡವರು ತಮ್ಮ ಆಚಾರ ವಿಚಾರ ಪದ್ಧತಿ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲೂ ರಾಜಕೀಯ ಬೆರೆಸಬಾರದು ಎಂದು ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸ್ಥಾಪಕ ಅಧ್ಯಕ್ಷ ಡಾ. ಉಳ್ಳಿಯಡ ಪೂವಯ್ಯ ಹೇಳಿದರು. ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಶುಕ್ರವಾರ ಕೊಡವ ಸಮಾಜದ ಆವರಣದಲ್ಲಿ ಕೈಲ್ ಪೋದ್ ಹಬ್ಬದ ಪ್ರಯುಕ್ತ ನಡೆದ ಒತ್ತೋರ್ಮೆ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕೊಡವಾಮೆ, ಕೊಡವ ಜನಾಂಗ, ಸಂಸ್ಕೃತಿ, ಆಚಾರ, ವಿಚಾರ ಪದ್ಧತಿ ಪರಂಪರೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ ಅವರು ಕೊಡವರ ಜನಸಂಖ್ಯೆ ಇಳಿಮುಖವಾಗುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿದರು. ಕೊಡವರು ಸ್ವಾಭಿಮಾನಿಗಳು, ಸರ್ಕಾರದ ಯಾವುದೇ ಮೀಸಲಾತಿ, ಸವಲತ್ತುಗಳು ಸಿಗಬೇಕಾದರೂ ಕೂಡ ಎಲ್ಲರೂ ರಾಜಕೀಯ ರಹಿತವಾಗಿ ಹೋರಾಟ ಮಾಡಬೇಕು. ಬದುಕಿನ ಪ್ರತಿ ಹೆಜ್ಜೆಯಲ್ಲೂ ಕೊಡವತನವನ್ನು ಮರೆಯಬಾರದು ಎಂದರು.

ಕೊಡಗು ಗ್ರೀನ್ ಸಿಟಿ ಫೋರಮ್ ಅಧ್ಯಕ್ಷ ಚೆಯ್ಯಂಡ ಸತ್ಯ ಮಾತನಾಡಿ ಕೊಡವ ಆಚಾರ ವಿಚಾರ, ಪದ್ಧತಿಯನ್ನು ಉಳಿಸಿ ಬೆಳೆಸುವಲ್ಲಿ ಯುವ ಜನಾಂಗದ ಪಾತ್ರ ಬಹುಮುಖ್ಯ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರದ ಪಾಠವನ್ನು ಮನೆಯಲ್ಲಿ ತಾಯಿ ಕಲಿಸಿ ಕೊಡಬೇಕು ಎಂದರು.

ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಮೂರು ದಿನ ಸಂಭ್ರಮದ ಕೈಲ್ ಮುಹೂರ್ತ ಹಬ್ಬ ಪ್ರಾಚೀನ ಕಾಲದಿಂದಲೂ ನಡೆಯುತ್ತಾ ಬಂದಿದೆ. ರಾಜರ ಕಾಲದಲ್ಲಿ ರಕ್ಷಣೆಯ ವ್ಯವಸ್ಥೆಯ ದೃಷ್ಟಿಯಿಂದ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ದಿನ ಹಬ್ಬದ ಕಾರ್ಯಕ್ರಮ ಇರುತ್ತಿದ್ದವು. ಅದು ಈಗಲೂ ಸಾಂಪ್ರದಾಯಕವಾಗಿ ಮುಂದುವರಿದಿದೆ ಎಂದರು.

ಉಪಾಧ್ಯಕ್ಷೆ ಅಮ್ಮಣಿಚಂಡ ಈಶ್ವರಿ ಗಂಗಮ್ಮ, ಸಲಹಾ ಸಮಿತಿ ಸದಸ್ಯರಾದ ಬಿದ್ದಂಡ ರಾಣಿ, ನಾಯಕಂಡ ಬೇಬಿ ಚಿಣ್ಣಪ್ಪ, ಖಜಾಂಚಿ ತಾತಂಡ ಯಶು ಕಬೀರ್, ಪ್ರಮುಖರಾದ ಮಾಳೇಟ್ಟಿರ ಕವಿತಾ ಶ್ರೀನಿವಾಸ್, ಅಲ್ಲಪಂಡ ತಾರಾ, ನಾಯಡ ಪಾಲಿ, ಬಾಳೆಯಡ ಶೈಲಾ, ಬಯವಂಡ ಇಂದಿರಾ ಬೆಳ್ಳಿಯಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net