ಕೈಲ್‌ಮುಹೂರ್ತ ಕ್ರೀಡಾಕೂಟದ ಸಂಭ್ರಮ

29mdk05
Published on

ಮಡಿಕೇರಿ:

ಜಿಲ್ಲೆಯಲ್ಲಿ ಕೈಲ್ ಮುಹೂರ್ತ ಹಬ್ಬದ ಸಂಭ್ರಮ ಶುರುವಾಗಿದೆ. ಗೋಮಾತೆ ಸೇರಿದಂತೆ ಕೋವಿ, ಕತ್ತಿ ಮುಂತಾದ ಆಯುಧಗಳಿಗೆ ಪೂಜೆ ಸಲ್ಲಿಸಿ ಕೃಷಿ ಫಸಲನ್ನು ರಕ್ಷಿಸಲು ಅಣಿಯಾಗುವುದರ ಜತೆಗೆ ಭರ್ಜರಿ ಭೋಜನ ಈ ಹಬ್ಬದ ವಿಶೇಷ. ಊರಲ್ಲಿ ಒಗ್ಗಟ್ಟು, ಕ್ರೀಡಾ ಮನೋಭಾವ, ಪ್ರತಿಭಾನ್ವೇಷಣೆಗೆ ಅವಕಾಶ ಮಾಡಿಕೊಡುವ ಗ್ರಾಮೀಣ ಕ್ರೀಡಾಕೂಟವೂ ಗಮನ ಸೆಳೆಯುತ್ತದೆ. ಈ ಬಾರಿ ಬಿಸಿಲಿನ ವಾತಾವರಣ ಇರುವುದು ಆಟೋಟಗಳ ಕಳೆ ಹೆಚ್ಚಿಸಿದೆ.

ಕೊಡಗಿನ ಆಯುಧ ಪೂಜೆ ಎಂದೇ ಪರಿಗಣಿಸಲಾಗಿರುವ ಕೈಲ್‌ಮೂಹೂರ್ತ ಹಬ್ಬದಲ್ಲಿ ಗ್ರಾಮೀಣ ಕ್ರೀಡಾಕೂಟಗಳೇ ಪ್ರಮುಖ ಆಕರ್ಷಣೆ. ಸುಮಾರು ೩ ತಿಂಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದವರಿಗೆ ಕೈಲ್‌ಮುಹೂರ್ತ ದಿನದಂದು ಮನೋರಂಜನೆ ರೂಪದಲ್ಲಿ ಆರಂಭವಾದ ಕ್ರೀಡಾಕೂಟಗಳು ಈಗ ಸ್ಪರ್ಧೆಯ ರೂಪ ಪಡೆದುಕೊಂಡಿದೆ. ಗ್ರಾಮ, ಗ್ರಾಮಗಳಲ್ಲೂ ಈ ಕ್ರೀಡಾಕೂಟಗಳು ಆಯೋಜನೆಯಾಗುತ್ತದೆ. ಹಬ್ಬದ ದಿನ ಅಥವಾ ಹಬ್ಬದ ನಂತರದ ದಿನದಲ್ಲಿ ಕ್ರೀಡಾಕೂಟ ನಡೆಯುತ್ತದೆ. ಈ ಕ್ರೀಡಾಕೂಟಗಳಲ್ಲಿ ಮಕ್ಕಳಿಂದ ಹಿರಿಯರ ತನಕ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಕೆಲವು ಕಡೆಗಳಲ್ಲಿ ಒಂದು ತಿಂಗಳ ಕಾಲ ವಿವಿಧ ಕ್ರೀಡೆಗಳನ್ನು ನಡೆಸುವುದು ಕೂಡ ಇದೆ. ಈ ಆಟೋಟಗಳಲ್ಲಿ ಗೆಲ್ಲುವುದು ಗ್ರಾಮೀಣರಿಗೆ ಪ್ರತಿಷ್ಠೆಯ ವಿಷಯ.

ಸಾಮಾನ್ಯವಾಗಿ ಕೈಲ್ ಮುಹೂರ್ತ ಹಬ್ಬದ ಸಂದರ್ಭದಲ್ಲಿ ಮಳೆಯ ವಾತಾವರಣ ಇರುತ್ತದೆ. ಭಾಗಮಂಡಲದಂತಹ ಮಳೆ ಊರಿನಲ್ಲಿ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದರೆ, ಉಳಿದೆಡೆ ತುಂತುರ ಮಳೆ, ಸ್ವಲ್ಪ ಚಳಿ… ಹೀಗೆ ಒಂದು ರೀತಿಯ ಜಿಗುಟು ಸನ್ನಿವೇಶ ಇರುತ್ತಿತ್ತು. ಆದರೆ ಈ ವರ್ಷ ಎಲ್ಲೆಡೆಯೂ ಬಿಸಿಲು ಕಂಡುಬರುತ್ತಿದೆ. ಆಗೊಮ್ಮೆ ಈಗೊಮ್ಮೆ ಮೋಡ ಕವಿದು ಮಳೆಗಾಲವನ್ನು ನೆನಪಿಸುವುದು ಹೊರತುಪಡಿಸಿದರೆ ಮಳೆಯ ಯಾವುದೇ ಲಕ್ಷಣಗಳು ಜಿಲ್ಲೆಯಲ್ಲಿ ಇಲ್ಲ. ಇದು ಕೈಲ್‌ಮುಹೂರ್ತ ಹಬ್ಬದ ಗ್ರಾಮೀಣ ಕ್ರೀಡಾಕೂಟ ಆಯೋಜನೆಗೆ ಪೂರಕ ವಾತಾವರಣ ಕಲ್ಪಿಸಿದೆ.

ಭಾಗಮಂಡಲ ವ್ಯಾಪ್ತಿಯಲ್ಲಿ ಸೋಮವಾರ (ಆ.೨೮) ಕೈಲ್‌ಮುಹೂರ್ತ ಹಬ್ಬ ಆಚರಿಸಲಾಯಿತು. ಕಳೆದ ತಿಂಗಳು ಮಳೆ ಬಂದ ಕಾರಣ ಪ್ರಕೃತಿಯಲ್ಲಿ ಹಸಿರ ಸಿರಿ ತುಂಬಿದೆ. ಆಟದ ಮೈದಾನ, ಸುತ್ತಲಿನ ತೋಟ, ಗದ್ದೆ, ದೂರದಲ್ಲಿ ಕಾಣುವ ಬೆಟ್ಟ-ಗುಡ್ಡ.. ಎಲ್ಲಾ ಕಡೆಯೂ ಕಣ್ಣಿಗೆ ತಂಪು ಕೊಡುವ ಹಸಿರು. ಇದರ ಜತೆಗೆ ಬಿಸಿಲು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರ ಉತ್ಸಾಹ ಇಮ್ಮಡಿಸಿದೆ.

ಹಬ್ಬದ ಹಿನ್ನೆಲೆಯಲ್ಲಿ ಭಾಗಮಂಡಲ ಸುತ್ತಮುತ್ತಲಿನ ಚೇರಂಗಾಲ, ತಣ್ಣಿಮಾನಿ, ಬಲ್ಲಮಾವಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಡೆದ ಅಪ್ಪಟ ಗ್ರಾಮೀಣ ಶೈಲಿಯ ಜಾನಪದ ಕ್ರೀಡೆಗಳು ಗಮನ ಸೆಳೆದವು. ಎಲ್ಲಾ ವಯಸ್ಸಿನವರಿಗೂ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಓಟದ ಸ್ಪರ್ಧೆಗಳು ಸಾಮಾನ್ಯವಾಗಿತ್ತು. ಮನೋರಂಜನೆಗಾಗಿ ನಡೆದ ಗೋಣಿಚೀಲದ ಓಟ, ಇಬ್ಬರ ಕಾಲು ಕಟ್ಟಿ ಓಡಿಸುವುದು, ಪತ್ನಿ ಹೊತ್ತುಕೊಂಡು ಪತಿ ಓಡುವುದು ಮತ್ತಿತರ ಆಟಗಳು ಸೇರಿದ್ದವರನ್ನು ರಂಜಿಸಿತು.

ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆದ ಹಗ್ಗಜಗ್ಗಾಟ ಸ್ಪರ್ಧೆ ತುಂಬಾ ರೋಚಕತೆಯಿಂದ ಕೂಡಿತ್ತು. ತಂಡಗಳ ಬೆಂಬಲಿಗರಿಂದ ಬರುತ್ತಿದ್ದ ಪ್ರೋತ್ಸಾಹದ ಕೂಗು ಸುತ್ತಲಿನ ಬೆಟ್ಟಗುಡ್ಡಗಳಿಗೆ ತಗುಲಿ ಪ್ರತಿಧ್ವನಿಸುತ್ತಿತ್ತು. ಪುರುಷರಿಗಾಗಿ ನಡೆದ ಕೋಳಿ ಜೂಜು ಆಟ ಗಮನ ಸೆಳೆಯಿತು. ಸೂಜಿಗೆ ದಾರ ಪೋಣಿಸುವುದು, ಭಾರದ ಗುಂಡು ಎಸೆತ, ವಿಷದ ಚೆಂಡು, ಹಬ್ಬಕ್ಕೆ ಆಗಮಿಸಿದ್ದ ಬಂಧುಗಳಿಗಾಗಿ ನಡೆದ ಬಕೆಟ್‌ಗೆ ನಿಂಬೆ ಹಣ್ಣು ಹಾಕುವ ಸ್ಪರ್ಧೆ, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳಲ್ಲಿ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು.

ಕೈಲ್‌ಮುಹೂರ್ತ ಕ್ರೀಡಾಕೂಟ ಕೇವಲ ಆಟೋಟ, ಸ್ಪರ್ಧೆ, ಬಹುಮಾನಕ್ಕೆ ಮಾತ್ರ ಸೀಮಿತವಾಗಿದೆ ಗ್ರಾಮಸ್ಥರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯೂ ಆಯಿತು. ಉದ್ಯೋಗ ಮತ್ತಿತರ ಕಾರಣಗಳಿಂದ ಬೇರೆ ಬೇರೆ ಕಡೆ ನೆಲೆಸಿರುವವರು ಹಬ್ಬದ ನೆಪದಲ್ಲಿ ಊರಿಗೆ ಬಂದಿದ್ದರು. ಹಾಗಾಗಿ ಪರಸ್ಪರರ ಭೇಟಿಗೂ ಈ ಕ್ರೀಡಾಕೂಟ ಅವಕಾಶ ಕೊಟ್ಟಿತು. ಮಕ್ಕಳು, ಯುವಕರಿಗೆ ಓದು ಮತ್ತು ಉದ್ಯೋಗದ ಮಾರ್ಗದರ್ಶನ ನೀಡುವುದಕ್ಕೆ ವೇದಿಕೆಯೂ ಆಯಿತು.

ಮಲೆನಾಡಿನ ಮಡಿಲಲ್ಲಿ ಇರುವ ಕೊಡಗಿನಲ್ಲಿ ಮೊದಲು ಭತ್ತವೇ ಪ್ರಧಾನ ಕೃಷಿ ಆಗಿತ್ತು. ಹಾಗಾಗಿ ಜಿಲ್ಲೆಯಲ್ಲಿ ಭತ್ತದ ಕಣಜ ಎಂದು ಕೂಡ ಕರೆಯಲಾಗುತ್ತಿತ್ತು. ವರ್ಷದ ಊಟ ಮತ್ತು ಖರ್ಚಿಗಾಗಿ ಇಲ್ಲಿಯವರು ಭತ್ತವನ್ನೇ ಬೆಳೆಯುತ್ತಿದ್ದರು. ಕೃಷಿ ಚಟುವಟಿಕೆಗೆ ಎತ್ತುಗಳನ್ನು ಬಳಸಲಾಗುತ್ತಿತ್ತು. ಜೂನ್‌ನಿಂದ ಶುರುವಾಗುತ್ತಿದ್ದ ಭತ್ತಕ್ಕೆ ಸಂಬಂಧಿಸಿದ ಕೃಷಿ ಚಟುವಟಿಕೆಗಳು ಆಗಸ್ಟ್ ತನಕವೂ ಸುರಿಯುವ ಜಡಿ ಮಳೆಯ ಮಧ್ಯೆಯೇ ನಡೆಯುತ್ತಿತ್ತು. ಒಂದು ಹಂತದ ಚಟುವಟಿಕೆಗಳು ಮುಗಿಯುತ್ತಿದ್ದಂತೆಯೇ ದೇಹ ಮತ್ತು ಮನಸ್ಸಿಗೆ ಚೈತನ್ಯ ತುಂಬುವ ಸಲುವಾಗಿ ಕೈಲ್‌ಮುಹೂರ್ತ ಹಬ್ಬದ ಆಚರಣೆ ರೂಢಿಗೆ ಬಂತು ಎನ್ನುತ್ತಾರೆ ಹಿರಿಯರು. ಕೈಲ್ ಮುಹೂರ್ತ ಹಬ್ಬದ ಸಂದರ್ಭದಲ್ಲಿ ಕೃಷಿಗೆ ಸಹಕರಿಸಿದ ಎತ್ತುಗಳಿಗೆ ಸ್ವಾತಂತ್ರ್ಯ ಕೊಡುವ ಸಲುವಾಗಿ ನೊಗವನ್ನು ಬಿಚ್ಚಿಡುವ ಸಂಪ್ರದಾಯದ ಜತೆಗೆ ಕೃಷಿ ಸಾಮಾಗ್ರಿಗಳಿಗೆ, ಆಯುಧಗಳಿಗೆ, ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುವ ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಹಿರಿಯರು ದೇವರನ್ನು, ಕುಟುಂಬದ ಮೂಲ ಪುರುಷರನ್ನು ಪ್ರಾರ್ಥಿಸಿದರೆ, ಕಿರಿಯರು ಹಿರಿಯರ ಕಾಲು ಮುಟ್ಟಿ ನಮಸ್ಕಾರ ಮಾಡಿ ಆರ್ಶೀರ್ವಾದ ಪಡೆಯುತ್ತಾರೆ. ಮನೆಯಲ್ಲಿ ಮಾಡಿದ ಅಡುಗೆ ಮತ್ತು ಮದ್ಯವನ್ನು ಗುರು ಹಿರಿಯರಿಗೆ ನೈವೇದ್ಯ ಇಡುತ್ತಾರೆ. ಹಂದಿಮಾಂಸದ ಸಾರು, ಅಕ್ಕಿ ಕಡಬು, ತಟ್ಟೆ ಇಡ್ಲಿ ಈ ಹಬ್ಬದಲ್ಲಿ ಪ್ರಮುಖ ಖಾದ್ಯ. ಮದ್ಯವೂ ಇರುತ್ತದೆ. ಕೊಡವ ಕ್ಯಾಲೆಂಡರ್ ಪ್ರಕಾರ ಪ್ರತಿ ವರ್ಷ ಸೆಪ್ಟಂಬರ್ ೩ಕ್ಕೆ ಸಾಮೂಹಿಕ ಕೈಲ್‌ಮುಹೂರ್ತ ಆಚರಣೆ ಇರುತ್ತದೆ. ಆದರೆ ಕೆಲವು ಭಾಗದಲ್ಲಿ ಆ.೨೫, ೨೮, ೨೯ರಂದೂ ಆಚರಿಸಲಾಗುತ್ತದೆ.

ಉದ್ಯೋಗ ಮತ್ತಿತರ ಕಾರಣಗಳಿಂದ ಬೇರೆ ಬೇರೆ ಕಡೆ ನೆಲೆಸಿರುವವರಿಗೆ ಒಟ್ಟಿಗೆ ಸೇರಲು ಇದೊಂದು ಉತ್ತಮ ಅವಕಾಶ. ಇಂದಿನ ಮಕ್ಕಳು ಮೊಬೈಲ್, ಟಿವಿ ಎಂದು ನಾಲ್ಕು ಗೋಡೆಗಳ ನಡುವೆ ಸೀಮಿತವಾಗುತ್ತಿರುವ ಸಂದರ್ಭದಲ್ಲಿ ಅವರಿಗೂ ಇಂಥ ಒಂದು ಪ್ರಪಂಚ ಇದೆ ಎಂದು ಪರಿಚಯಿಸಲೂ ಇದು ಸಹಕಾರಿ. ಯುವ ಜನಾಂಗಕ್ಕೆ ಅವರ ಭವಿಷ್ಯದ ದಾರಿ ಕಂಡುಕೊಳ್ಳಲು ಮಾರ್ಗದರ್ಶನ ನೀಡುವುದಕ್ಕೂ ಈ ವೇದಿಕೆ ಸದುಪಯೋಗ ಆಯಿತು.
ಕೋಡಿ ರಾಜಗೋಪಾಲ್, ಮಾಜಿ ಸೈನಿಕ ಚೇರಂಗಾಲ ಗ್ರಾಮ

ಕೈಲ್‌ಮುಹೂರ್ತ ಕ್ರೀಡಾಕೂಟದ ನೆಪದಲ್ಲಿ ಎಲ್ಲರೂ ಒಂದೆಡೆ ಸೇರುವಂತಾಯಿತು. ಹಿಂದಿನವರು ಮನೋರಂಜನೆ ರೂಪದಲ್ಲಿ ಕೃಷಿ ಬದುಕಿನ ತಮ್ಮ ಆಯಾಸವನ್ನು ಮರೆಯಲು ಇಂತಹ ಆಟೋಟಗಳನ್ನು ಆಯೋಜಿಸುತ್ತಿದ್ದರು. ಆ ಸಂಭ್ರಮ ವರ್ಷ ಪೂರ್ತಿ ಇರುತ್ತಿತ್ತು. ಇಂದಿನ ಆಧುನಿಕ ಯುಗದಲ್ಲಿ ನಾವು, ನಮ್ಮ ಕೆಲಸ ಎಂದು ಮುಳುಗಿ ಹೋಗಿರುತ್ತೇವೆ. ಜೀವನದ ಜಂಜಾಟಗಳಿಂದ ಒಂದಿಷ್ಟು ಹೊರಬರಲು ನಾವೀಗ ಇದನ್ನು ಬಳಸಿಕೊಳ್ಳುವಂತಾಗಿದೆ. ಗ್ರಾಮೀಣ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು ಖುಷಿಕೊಟ್ಟಿತು.
ಶೋಬಿತಾ, ಚೇರಂಗಾಲ ನಿವಾಸಿ

ಕೃಷಿ ಕೆಲಸ ಮುಗಿದ ಕೂಡಲೇ ದೇಹ ಮತ್ತು ಮನಸ್ಸಿಗೆ ಚೈತನ್ಯ ತುಂಬಲು ಕೈಲ್‌ಮುಹೂರ್ತ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ರೈತರ ಜತೆಗಾರರಾದ ಎತ್ತುಗಳಿಗೆ ಈ ಹಿಂದೆ ಈ ದಿನದಿಂದಲೇ ಸ್ವಾತಂತ್ರ್ಯ ನೀಡುವ ಸಂಕೇತವಾಗಿ ನೊಗ ತೆಗೆಯಲಾಗುತ್ತಿತ್ತು. ಈ ಸಾಂಪ್ರದಾಯಿಕ ಹಬ್ಬದ ಮಹತ್ವವನ್ನು ಇಂದಿನ ಪೀಳಿಗೆಗೂ ಪರಿಚಯಿಸುವ ಅಗತ್ಯ ಇದೆ.
ಬಾಚರಣಿಯಂಡ ಪಿ. ಅಪ್ಪಣ್ಣ, ಮಾಜಿ ಅಧ್ಯಕ್ಷ, ಕೊಡವ ಸಾಹಿತ್ಯ ಅಕಾಡೆಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net