

ಮಡಿಕೇರಿ: ವಿವೇಕಾನಂದ ಯುವಕ ಸಂಘ ಮತ್ತು ಜಿಲ್ಲಾಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮರಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ೫೧ನೇ ವರ್ಷದ ಕೈಲ್ ಮುಹೂರ್ತ ಗ್ರಾಮೀಣ ಕ್ರೀಡಾಕೂಟ ಸಡಗರ ಸಂಭ್ರಮದಿಂದ ನೆರವೇರಿತು.
ಪ್ರಾಕೃತಿಕ ವಿಕೋಪ ಮತ್ತು ಕರೊನಾ ಮಹಾ ಮಾರಿಯಿಂದಾಗಿ ಕಳೆದ ಐದು ವರ್ಷಗಳಿಂದ ಕ್ರೀಡಾಕೂಟವನ್ನು ಸಮರ್ಪಕವಾಗಿ ಆಯೋಜನೆ ಮಾಡಲಾಗಿರಲಿಲ್ಲ. ಆದರೆ ಈ ವರ್ಷ ಸಾಕಷ್ಟು ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಿದ್ದು ಗ್ರಾಮಸ್ಥರೆಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷೆಯನ್ನು ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಬಡುವಂಡ್ರ ಲಕ್ಷ್ಮಿಪತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾರತಿ ಹೈಸ್ಕೂಲ್ ಸೊಸೈಟಿ ಉಪಾಧ್ಯಕ್ಷ ಕೋಚನ ಲವಿನ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಅಚ್ಚಕಾಳೇರ ಕಾವೇರಪ್ಪ, ಮರಗೋಡು ಎಸ್ಡಿಎಂಸಿ ಅಧ್ಯಕ್ಷ ವಿಜಯ್, ಕಾಫಿ ಬೆಳೆಗಾರ ಕೋಚನ ಅನೂಪ್ ಪಾಲ್ಗೊಂಡಿದ್ದರು.
ಕ್ರೀಡಾಕೂಟದಲ್ಲಿ ಪುರುಷರು, ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರಿಗೆ ಸುಮಾರು ೨೮ ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹಗ್ಗ ಜಗ್ಗಾಟ, ಮೂರು ಕಾಲೀನ ಓಟ, ಗೋಣಿ ಚೀಲದ ಓಟ, ಕಪ್ಪೆ ಹಾರುವುದು, ಕಾಳು ಹೆಕ್ಕುವುದು, ನೀರು ತುಂಬಿದ ಚೆಂಬಿನ ಓಟ, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು ಹೀಗೆ ಹಲವು ಬಗೆಯ ಗ್ರಾಮೀಣ ಕ್ರೀಡೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ಸಂಭ್ರಮಿಸಿದರು. ಪುರುಷರ ಹಗ್ಗ ಜಗ್ಗಾಟವಂತೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು. ಹಗ್ಗಜಗ್ಗಾಟದ ರೋಚಕ ಪೈಪೋಟಿಯನ್ನು ಕಣ್ತುಂಬಿಸಿಕೊಂಡ ಕೆಲ ಮಂಡ್ಯ ಪ್ರವಾಸಿಗರು ವಿಜೇತ ತಂಡಕ್ಕೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಯ್ಯಂಡ್ರ ಪೂರ್ಣಿಮಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಂಗೀರ ಅಶ್ವಿನ್, ಹೊಸ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭುಶೇಖರ್, ಸದಸ್ಯೆ ಬೊಳಿಯಾಡೀರ ಉಷಾ ತಂಗಮ್ಮ, ಮರಗೋಡು ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಕೆ.ಚಂದ್ರಕಲಾ ಮರಗೋಡು ಗ್ರಾಮ ಪಂಚಾಯತಿ ಸದಸ್ಯ ಐ.ಪಿ.ನಾಗೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿಜೇತ ಅಭ್ಯರ್ಥಿಗಳಿಗೆ ಬಹುಮಾನ ವಿತರಿಸಿದರು. ವಿಜೇತ ಕ್ರೀಡಾಪಟುಗಳಿಗೆ ಆಕರ್ಷಕ ನಗದು ನೀಡಿ ಗೌರವಿಸಲಾಯಿತು.