ಅಪಾಯಕಾರಿ ಕೈಕಂಬ ಜಂಕ್ಷನ್

new
Published on

ನರೇಂದ್ರ ಹೆಬ್ರಿ

ತಾಲೂಕಿನ ಸೀತಾನದಿ ಸಮೀಪದ ಕೈಕಂಬ ಜಂಕ್ಷನ್‌ನಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು, ನಾಲ್ಕು ತಿಂಗಳಲ್ಲಿ ಏಳು ಅವಘಡ ಸಂಭವಿಸಿ ಅಪಾಯಕಾರಿ ವಲಯವಾಗಿ ಮಾರ್ಪಟ್ಟಿದೆ.

ಉಡುಪಿ -ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಮತ್ತು ಸೀತಾನದಿ-ಮುದ್ರಾಡಿ-ಕಾರ್ಕಳ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಕೈಕಂಬದ ಸರ್ಕಲ್ ಅವೈಜ್ಞಾನಿಕ ತಿರುವು ಮತ್ತು ಕಿರಿದಾದ ರಸ್ತೆಯಿಂದ ಕೂಡಿದೆ. ಇಲ್ಲಿ ವಾಹನ ಸವಾರರು ವೇಗವಾಗಿ ಚಾಲನೆ ಮಾಡಿ ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ಕೈಕಂಬದಲ್ಲಿ ನಿರ್ಮಿಸಿದ ಸರ್ಕಲ್ ಕೂಡ ಅವೈಜ್ಞಾನಿಕವಾಗಿದ್ದು, ಸವಾರರಿಗೆ ಗೋಚರಿಸುವುದೇ ಇಲ್ಲ. ಅದಲ್ಲದೆ ಕಾರ್ಕಳ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಸರ್ಕಲ್ ಬಳಸದೆ ನೇರವಾಗಿ ವಾಹನ ಚಲಾಯಿಸುತ್ತಾರೆ. ಆದ್ದರಿಂದ ವೇಗ ನಿಯಂತ್ರಕ ಅಳವಡಿಸಲು ಜನ ಒತ್ತಾಯಿಸಿದ್ದಾರೆ.

ಶಿವಮೊಗ್ಗ ಮತ್ತು ಉಡುಪಿಗೆ ಸರಕು ಸಾಗಣೆ, ಲಘು ವಾಹನ, ದಿನನಿತ್ಯದ ಪ್ರಯಾಣಿಕರು ಸಂಚರಿಸುತ್ತಿದ್ದು, ಮಣಿಪಾಲ ಆಸ್ಪತ್ರೆ ಸಂಪರ್ಕಿಸುವ ಆಂಬುಲೆನ್ಸ್ ಕೂಡ ಹೆಚ್ಚು ಸಂಚರಿಸುತ್ತವೆ. ಒಂದು ವೇಳೆ ಅಪಘಾತ ಸಂಭವಿಸಿದರೆ ಆಂಬುಲೆನ್ಸ್‌ನಲ್ಲಿ ಇರುವ ರೋಗಿಗಳ ಜೀವಕ್ಕೆ ಆಪತ್ತು ಸಾಧ್ಯತೆಯಿದೆ. ಶಿವಮೊಗ್ಗದಿಂದ ಕಾರ್ಕಳಕ್ಕೆ ಸಂಚರಿಸುವ ಪ್ರಯಾಣಿಕರಿಗೆ ಸೂಚನಾ ಫಲಕವಿಲ್ಲದೆ ಜನ ಗೊಂದಲಕ್ಕೀಡಾಗುತ್ತಿದ್ದಾರೆ. ಈ ಹಿಂದೆ ರಸ್ತೆ ಫಲಕ ಅಳವಡಿಸುವಾಗ ಸರಿಯಾದ ಸ್ಥಳದಲ್ಲಿ ನಿರ್ಮಿಸುವಂತೆ ಸಾರ್ವಜನಿಕರು ಸೂಚಿಸಿದ್ದರೂ ಅಧಿಕಾರಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ಜನ ಆರೋಪಿಸಿದ್ದಾರೆ.

ರಸ್ತೆ ವಿಭಜನೆ ಗೊತ್ತಾಗದೆ ಸಮಸ್ಯೆ

ರಸ್ತೆಯ ಎರಡೂ ಬದಿ ಬೃಹತ್ ಗಾತ್ರದ ಮರ ಇರುವುದರಿಂದ ರಸ್ತೆ ವಿಭಜನೆ ಮತ್ತು ಮುಖ್ಯರಸ್ತೆ ಯಾವುದೆಂಬುವುದು ಗೋಚರಿಸುವುದಿಲ್ಲ. ಟಿಪ್ಪರ್, ಮೊಟ್ಟೆ, ಕೋಳಿ, ತರಕಾರಿ ಸಾಗಿಸುವ ವಾಹನಗಳು ವೇಗದಲ್ಲಿ ಸಂಚರಿಸುವುದರಿಂದ ಯಾವುದೇ ಕ್ಷಣ ಅಪಘಾತ ಸಂಭವಿಸಬಹುದು. ಈಗಾಗಲೇ ಅನೇಕ ಹಿಟ್ ಆ್ಯಂಡ್ ರನ್ ಪ್ರಕರಣಗಳು ನಡೆದಿದ್ದು, ಪೊಲೀಸ್ ಮತ್ತು ಸಂಬಂಧಿತ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನ ಒತ್ತಾಯಿಸಿದ್ದಾರೆ.

ಹಂಪ್ ಅಳವಡಿಸಲು ಆಗ್ರಹ

ಕಾರ್ಕಳ ಸಂಪರ್ಕಿಸುವ ರಸ್ತೆಯಲ್ಲಿ ಈ ಹಿಂದೆ ಹಂಪ್ ಅಳವಡಿಸಲಾಗಿತ್ತು. ಈಗ ರಸ್ತೆ ಕಾರ್ಯ ಮುಗಿದ ನಂತರ ತೆರವುಗೊಳಿಸಲಾಗಿದೆ. ಮತ್ತೆ ವೇಗ ನಿಯಂತ್ರಕ ಅಳವಡಿಸಿ ಸಂಭವಿಸಬಹುದಾದ ಅಪಾಯ ತಪ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲ್ಲಿನ ಸರ್ಕಲ್ ಸಮಸ್ಯೆ ಬಗೆಹರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಪೊಲೀಸ್ ಇಲಾಖೆಯಿಂದಲೂ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ.

ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ದೊಡ್ಡಮಟ್ಟದ ಅವಘಡಗಳನ್ನು ತಪ್ಪಿಸಲು, ಈಗಲೇ ಕಾರ್ಯತತ್ಪರರಾಗುವಂತೆ ಸಂಬಂಧಪಟ್ಟ ಇಲಾಖೆಗೆ ಈಗಾಗಲೇ ಸೂಚಿಸಲಾಗಿದೆ. ಶೀಘ್ರದಲ್ಲಿ ಈ ಸಮಸ್ಯೆಗೆ ಪರಿಹಾರ ದೊರಕಲಿದೆ.

ಜ್ಯೋತಿ ಹರೀಶ್ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯರು

ವಾಹನ ಸವಾರರು ಯಾರು ಕೂಡ ಸರ್ಕಲ್‌ಗೆ ಸುತ್ತು ಬಳಸಿ ಬರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ವಾಹನಗಳು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತವೆ. ಶೀಘ್ರವೇ ಸೂಕ್ತ ವೇಗ ನಿಯಂತ್ರಕ ಅಳವಡಿಸಬೇಕು.

ದಿವಾಕರ ಶೆಟ್ಟಿ, ಸ್ಥಳೀಯ ನಿವಾಸಿ

ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದೇನೆ. ವೇಗ ನಿಯಂತ್ರಕ ಅಥವಾ ರಿಫ್ಲೆಕ್ಟರ್ ಅಳವಡಿಸುವುದರ ಮೂಲಕ ವಾಹನಗಳ ವೇಗ ನಿಯಂತ್ರಿಸಬೇಕಾಗಿದೆ. ದಯವಿಟ್ಟು ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ವಹಿಸಲಿ.

ರಂಗನಾಥ್ ಪೂಜಾರಿ, ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net