

ನೆಲಮಂಗಲ: ರಾಷ್ಟ್ರೀಯ ಆದಾಯದ ಜತೆಗೆ ದೇಶದ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಕೊಡುಗೆ ಅನನ್ಯವಾದದ್ದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಎಂ.ನಾಗರಾಜು ತಿಳಿಸಿದರು.
ಪಟ್ಟಣದ ಹಾಲಿಡೇ ಪ್ಲಾಮ್ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ನೆಲಮಂಗಲ ಕೈಗಾರಿಕಾ ಸಂಘ (ಜಿಎನ್‌ಐಎ) ಕೈಗಾರಿಕೋದ್ಯಮಿಗಳು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪರಸ್ಪರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ಕೃಷಿ ಪ್ರಧಾನ ದೇಶವಾದರೂ ಕೈಗಾರಿಕಾ ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧಿಸುತ್ತಿದೆ. ಕೈಗಾರಿಕೆಗಳಿಂದ ತಲಾ ಆದಾಯ, ವಿದೇಶಿ ವಿನಿಮಯ ಹೆಚ್ಚುತ್ತಿದ್ದು, ವಿದೇಶಗಳ ನಡುವೆ ಬಾಂಧವ್ಯ ಉಚ್ಚಾಯ ಸ್ಥಿತಿಯನ್ನು ತಲುಪಲು ಸಾಧ್ಯವಾಗಿದೆ ಎಂದರು.
ಕೈಗಾರಿಕೆಗಳ ಸ್ಥಾಪನೆ, ಕಾರ್ಯನಿರ್ವಹಣಾಧಿಕಾರಿ ಕಾರ್ಯಾರಂಭ ಅವಶ್ಯವಿರುವ ವ್ಯವಸ್ಥೆ ಮಾಡಿಕೊಡಬೇಕಾದ ಜವಾಬ್ದಾರಿ ಕೇಂದ್ರ ರಾಜ್ಯ ಸರ್ಕಾರಗಳಿಗಷ್ಟೆ ಅಲ್ಲ ಸ್ಥಳೀಯ ಆಡಳಿತಕ್ಕೂ ಇದೆ. ಗ್ರಾಮೀಣ ಭಾಗದ ಕೈಗಾರಿಕೆಗಳ ತೆರಿಗೆ ವಿಚಾರವಾಗಿ ಇತ್ತೀಚೆಗೆ ಸರ್ಕಾರದ ಹಂತದಲ್ಲಿ ತಿದ್ದುಪಡಿಯಾಗಿದೆ ಎಂದು ತಿಳಿಸಿದರು.
ಭೂ ಪರಿವರ್ತನೆ ಜತೆಗೆ ಸ್ಥಳೀಯ ಸಕ್ಷಮ ಪ್ರಾಧಿಕಾರ (ಎನ್‌ಪಿಎ)ದಿಂದ ನಕ್ಷೆ ಅನುಮೋದನೆ ಪಡೆದು ಕೈಗಾರಿಕೆಗಳ ಆಸ್ತಿಯನ್ನು ಇ-ಸ್ವತ್ತಿಗೆ ಒಳಪಡಿಸಲಾಗುತ್ತಿದ್ದ ಎ ಮಾದರಿ ಖಾತೆ (ಕ್ರಮಬದ್ಧ ಆಸ್ತಿ) ನೀಡಿದರೆ ಭೂ ಪರಿವರ್ತನೆ ಆಗಿದ್ದ ಎನ್‌ಪಿಎಯಿಂದ ನಕ್ಷೆ ಅನುಮೋದನೆಯಾಗದೇ ಇರುವ ಆಸ್ತಿಗಳಿಗೆ ಬಿ ಮಾದರಿ (ಕ್ರಮಬದ್ಧವಲ್ಲದ ಆಸ್ತಿ) ಖಾತೆ ನೀಡಲಾಗುತ್ತಿದೆ ಎಂದರು.
ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಭೂಮಿಯ ಬೆಲೆ ಹೆಚ್ಚಾಗಿರುವುದು ಒಂದೆಡೆಯಾದರೆ ಕೆಲ ಅಧಿಕಾರಿಗಳ ಅಧಿಕಾರ ದುರುಪಯೋಗದಿಂದಾಗಿ ಅವ್ಯವಹಾರ ನಡೆದಿರುವ ಆರೋಪ ಬಂದಿದ್ದರಿಂದ ಇ-ಸ್ವತ್ತು ಇಳಪಡಿಸುವ ಪ್ರಕ್ರಿಯೆಗೆ ತಾಪಂ ಇಒ ಅವರಿಗೂ ಅಧಿಕಾರ ನೀಡಿದ್ದು, ಅವ್ಯವಹಾರಗಳಿಗೆ ಕಡಿವಾಣ ಹಾಕಲಾಗಿದೆ ಎಂದರು.
ಕೈಗಾರಿಕರಗಳು ಸಾಮಾಜಿಕ ಜವಾಬ್ದಾರಿ ಅನುದಾನದಲ್ಲಿ ಸರ್ಕಾರಿ ಶಾಲೆಗಳಿಗೆ ಅವಶ್ಯವಿರುವ ಮೂಲಸೌಕರ್ಯ, ಕುಡಿಯುವ ನೀರಿನಘಟಕ ನಿರ್ಮಿಸುತ್ತಿರುವುದು ಸಂತಸದ ಸಂಗತಿ, ಅದರಂತೆ ಅಂತರ್ಜಲ ವೃದ್ಧಿ ಹಾಗೂ ಪರಿಸರ ಸಂರಕ್ಷಣೆಗೂ ಹೆಚ್ಚಿನಾದ್ಯತೆ ನೀಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಉದ್ಭವಿಸಬಹುದಾದ ನೀರಿನ ಸಮಸ್ಯೆ ಪರಿಸರ ಮಾಲಿನ್ಯ ನಿಯಂತ್ರಿಸಬಹುದಾಗಿದೆ ಎಂದರು.
ನೆಲಮಂಗಲ ಕೈಗಾರಿಕಾ ಸಂಘದ ಅಧ್ಯಕ್ಷ ಇ.ಟಿ.ಕೆ.ರಾಜು ಮಾತನಾಡಿ, ಕೈಗಾರಿಕೆ ತೆರಿಗೆ, ಇ-ಸ್ವತ್ತು ವಿಚಾರವಾಗಿ ಸರ್ಕಾರದ ಹಂತದಲ್ಲಿ ಸಾಕಷ್ಟು ತಿದ್ದುಪಡಿಗಲಾಗಿದ್ದು, ಕಾನೂನು ಅರಿವು ಮೂಡಿಸುವುದು ಹಾಗೂ ಸ್ಥಳೀಯ ಆಡಳಿತ ಹಾಗೂ ಕೈಗಾರಿಕೆಗಳ ನಡುವೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಭೂ ಪರಿವರ್ತನೆ ಜತೆಗೆ ಸಕ್ಷಮ (ಎನ್‌ಪಿಎ) ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಮಾಡಿರುವ ಆಸ್ತಿಗೆ ತೆರಿಗೆ ನಿರ್ಧರಿಸುವುದು, ಇ-ಸ್ವತ್ತಿಗೊಳಪಡಿಸುವಲ್ಲಿ ಕೆಲ ಪಿಡಿಒ, ಇಒಗಳು ವಿಳಂಬ ನೀತಿ ಅನುಸರಿಸುತ್ತಿದ್ದು, ಕೆಲ ಉದ್ಯಮಿಗಳಿಗೆ ತೊಂದರೆ ಆಗುತ್ತಿದೆ. ಅದ್ದರಿಂದ ಸಮರ್ಪಕ ದಾಖಲೆಗಳಿರುವ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡುವಂತೆ ಕೆಳಹಂತದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಓಗೆ ಹರ್ಷ ಗ್ರೂಫ್ ಆಫ್ ಕಂಪನಿ ಅಧ್ಯಕ್ಷ ಎಸ್.ಶಿವಕುಮಾರ್ ಮನವಿ ಮಾಡಿದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘಸ ಅಧ್ಯಕ್ಷ ರಾಜು, ಉಪಾಧ್ಯಕ್ಷ ಅರಸಪ್ಪ, ಕಾರ್ಯದರ್ಶಿ ಎಂ.ಜಿ.ರಾಜಗೋಪಾಲ್, ತಾಲೂಕು ಪಂಚಾಯಿತಿ ಇಒ ಲಕ್ಷ್ಮೀನಾರಾಯಣ್, ನೆಲಮಂಗಲ ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ಎನ್.ಶೇಖರ್, ಕಾರ್ಯದರ್ಶಿ ಎಸ್.ಮಂಜುನಾಥ್, ಗಂಗಾಧರ್, ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕೈಗಾರಿಕಾ ಆಡಳಿತ ಮಂಡಳಿ ಅಧಿಕಾರಿಗಳು ಭಾಗವಹಿಸಿದ್ದರು.