ಕೈಗಾದಲ್ಲಿ ಉದ್ಯೋಗ ಕೊಡಿಸುವುದಾಗಿ ಮೋಸ..?

Kaiga-nuclear-power-plant
Published on

ಕಾರವಾರ: ಕೈಗಾ ಅಣು ವಿದ್ಯುತ್ ನಿಗಮದಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಕೆಲವು ಅಪರಿಚಿತ ವ್ಯಕ್ತಿಗಳು ಅಮಾಯಕರಿಂದ ಹಣ ಪಡೆದು ವಂಚಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಕೈಗಾ ಆಡಳಿತ ಎಚ್ಚರಿಕೆಯ ಸಂದೇಶ ನೀಡಿದೆ.
ಪತ್ರಿಕಾ ಹೇಳಿಕೆ ನೀಡಿರುವ ಕೈಗಾ ಸ್ಥಾನಿಕ ನಿರ್ದೇಶಕ ಪ್ರಮೋದ್ ಜಿ. ರಾಯಚೂರು, ಕೈಗಾ ಅಣು ವಿದ್ಯುತ್ ನಿಗಮವು ಕೇಂದ್ರ ಸರ್ಕಾರದ ಸಂಸ್ಥೆಯಾಗಿದ್ದು, ಸಂಸ್ಥೆಯಲ್ಲಿ ಪ್ರಸ್ತುತ ಕೆಲವು ವಿಭಾಗದಲ್ಲಿ ಉದ್ಯೋಗ ನೇಮಕಾತಿ ಕುರಿತ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಎಲ್ಲ ಪ್ರಕ್ರಿಯೆಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮತ್ತು ಸಂಸ್ಥೆಯ ಮಾರ್ಗಸೂಚಿಯಂತೆ ಅತ್ಯಂತ ಪಾರದರ್ಶಕವಾಗಿ ವಿಶೇಷ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳಡಿಯಲ್ಲಿ, ಮೆರಿಟ್ ಆಧಾರದಲ್ಲಿ ನಡೆಯುತ್ತಿವೆ. ಈ ಬಗ್ಗೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.npcilcareers.co.in ನಲ್ಲಿ ಪ್ರಕಟಿಸಲಾಗಿದೆ.
ಆದ್ದರಿಂದ ಸಾರ್ವಜನಿಕರು ಯಾವುದೇ ಅಪರಿಚಿತ ವ್ಯಕ್ತಿಗಳಿಂದ ಕೈಗಾದಲ್ಲಿ ಉದ್ಯೋಗ ಪಡೆಯಲು ಹಣ ನೀಡಿ ವಂಚನೆಗೊಳಗಾಗದೆ ಎಚ್ಚರಿಕೆಯಿಂದ ಇರಬೇಕು. ಈ ರೀತಿಯ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಲ್ಲಿ ದಕ್ಕೆ ಕೈಗಾ ಸಂಸ್ಥೆ ಜವಾಬ್ದಾರಿಯಲ್ಲ ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net