ಸ್ಪರ್ಧೆಗಿಳಿದ ಕೈ-ಕಮಲ-ದಳ ನಾಯಕರು

13-5-25
Published on

ವಿಕ್ರಮ ನಾಡಿಗೇರ ಧಾರವಾಡ

ಕನ್ನಡ ನಾಡು, ನುಡಿ, ಜಲ ವಿಷಯದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಗೆ ರಾಜಕೀಯ ಪಕ್ಷಗಳ ನಾಯಕರ ಪ್ರವೇಶವಾಗಿದ್ದರಿಂದ ಈ ಬಾರಿಯ ಚುನಾವಣೆ ರಂಗೇರಲಿದೆ.

ಚುನಾವಣೆ (ಮೇ 25 ರಂದು) ದಿನಾಂಕ ಘೋಷಣೆ ಆಗುತ್ತಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜಕೀಯ ನಾಯಕರು ಪೈಪೋಟಿ ನಡೆಸುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಸತತ 53 ವರ್ಷಗಳ ಕಾಲ ಸಂಘದ ಚುಕ್ಕಾಣಿ ಹಿಡಿದಿದ್ದ ಡಾ. ಪಾಟೀಲ ಪುಟ್ಟಪ್ಪ ನಿಧನದ ಬಳಿಕ 2021ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ರಾಜಕಾರಣಿಯ ಪ್ರವೇಶವಾಗಿತ್ತು.

ಆ ಚುನಾವಣೆಯಲ್ಲಿ ಬಿಜೆಪಿಯ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆಗಲೇ ಬಹುತೇಕರು ಸಂಘ ರಾಜಕಾರಣಿಗಳ ಹಿಡಿತಕ್ಕೆ ಸಿಲುಕಿತೇ? ಎಂದು ಪ್ರಶ್ನಿಸಲಾರಂಭಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್​ ಹಾಗೂ ಜೆಡಿಎಸ್​ ಪಕ್ಷಗಳ ನಾಯಕರು ಸ್ಪರ್ಧೆಗೆ ಇಳಿಯುವ ಮೂಲಕ ಸಾಂಸ್ಕೃತಿಕ ಲೋಕದ ದಿಗ್ಗಜ ಸಂಸ್ಥೆಗೆ ಅಧಿಕೃತವಾಗಿ ರಾಜಕೀಯ ಪ್ರವೇಶವಾದಂತಾಗಿದೆ.

ಸದ್ಯ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮತ್ತೊಂದು ಅವಧಿಗೆ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆ ಪಾಪು ಅಭಿಮಾನಿ ಬಳಗದಿಂದ ಕಾಂಗ್ರೆಸ್​ ಮುಖಂಡ, ವಿಧಾನಪರಿಷತ್​ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಸ್ಪರ್ಧೆ ಘೋಷಿಸಿದರು. ಇದೀಗ ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೇ ಸ್ವತಂತ್ರರಾಗಿ ಜೆಡಿಎಸ್​ ಮುಖಂಡ ಗುರುರಾಜ ಹುಣಸಿಮರದ ಸಹ ಕಣಕ್ಕಿಳಿದಿದ್ದಾರೆ. ಇದಲ್ಲದೆ ಪಾಪು ಅಭಿಮಾನಿ ಬಳಗದಿಂದ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಸಹೋದರ, ಕಾಂಗ್ರೆಸ್​ ಮುಖಂಡ ಶರಣಪ್ಪ ಕೊಟಗಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.

ರಾಜಕಾರಣಿಗಳನ್ನು ಹೊರತುಪಡಿಸಿ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಹಾಗೂ ಚಂದ್ರಶೇಖರ ನಾಯರ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಮೇ 13ರವರೆಗೆ ಅವಕಾಶವಿದೆ. ಹೀಗಾಗಿ ಇನ್ನಷ್ಟು ಜನರು ಸ್ಪರ್ಧೆಗಿಳಿಯುವ ಸಾಧ್ಯತೆಯೂ ಇದೆ. ಒಂದು ವೇಳೆ ಈ ಅವಧಿಯಲ್ಲಿ ಸಾಹಿತಿಗಳು, ಹೋರಾಟಗಾರರು ಸ್ಪರ್ಧೆಗೆ ನಿರಾಸಕ್ತಿ ವಹಿಸಿದಲ್ಲಿ ಸಂಘದ ಚುನಾವಣೆ ಬದಲು ಇದೂ ಒಂದು ರಾಜಕೀಯ ಚುನಾವಣೆ ಆಗುವಲ್ಲಿ ಯಾವುದೇ ಸಂದೇಹವಿಲ್ಲ.

ಸಾಹಿತಿಗಳಲ್ಲೇಕೆ ನಿರಾಸಕ್ತಿ?: ವಿದ್ಯಾವರ್ಧಕ ಸಂಘದ ಬಗ್ಗೆ ಸಾಕಷ್ಟು ಕಾಳಜಿ ತೋರುವ ಹಿರಿಯ ಸಾಹಿತಿಗಳು ಚುನಾವಣೆ ಸಂದರ್ಭದಲ್ಲಿ ತಟಸ್ಥರಾಗಿ ಉಳಿಯುತ್ತಿದ್ದಾರೆ. ಹಿರಿಯ, ಅನುಭವಿ ಸಾಹಿತಿಗಳು, ಹೋರಾಟಗಾರರು ಚುನಾವಣೆಗೆ ಧುಮಿಕಿದರೆ ರಾಜಕೀಯ ವ್ಯಕ್ತಿಗಳು ತಮ್ಮಿಂದ ತಾವೇ ಹಿಂದೆ ಸರಿಯುತ್ತಾರೆ. ಆದರೆ ಸಾಹಿತಿಗಳು ಮತ ಚಲಾವಣೆಗೆ ಮಾತ್ರ ಸೀಮಿತವಾಗಿರುವುದೇಕೆ? ಎಂಬುದೇ ಪ್ರಶ್ನೆಯಾಗಿದೆ. ಇದರಿಂದ ಸಂಘ ರಾಜಕೀಯ ವೇದಿಕೆಯಾಗುತ್ತಿರುವುದಂತೂ ಸ್ಪಷ್ಟ. ಇನ್ನೂ ಕಾಲ ಮಿಂಚಿಲ್ಲ. ಹಿರಿಯ ಸಾಹಿತಿಗಳು ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ವೇದಿಕೆಯಾದ ಪರಿವತಿರ್ಸದೆ, ಸಾಹಿತ್ಯ, ಕಲೆಯಲ್ಲಿ ಇನ್ನಷ್ಟು ಉತ್ತುಂಗಕ್ಕೆ ಏರಿಸಬೇಕು ಎಂಬುದೇ ಸಾಹಿತ್ಯಾಸಕ್ತಿಗಳ ಒತ್ತಾಸೆಯಾಗಿದೆ.

ಮುಂದುವರೆದ ಸಂಘರ್ಷ: ಜೆಡಿಎಸ್​ ಮುಖಂಡ ಗುರುರಾಜ ಹುಣಸಿಮರದ ಹಾಗೂ ಬೆಲ್ಲದ ಕುಟುಂಬದ ನಡುವೆ ರಾಜಕೀಯ ಸಂಘರ್ಷ ಹಲವು ವರ್ಷಗಳಿಂದ ನಡೆದೇ ಇದೆ. ಈ ಹಿಂದೆ ಧಾರವಾಡ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಹಾಗೂ ಲಿಂಗಾಯತ ಭವನದ ನಾಮಫಲಕ ವಿಚಾರವಾಗಿ ತಿಕ್ಕಾಟ ನಡೆದಿತ್ತು. ಈ ವಿಚಾರದಲ್ಲಿ ಗುರುರಾಜ ಹುಣಸಿಮರದ ಮೇಲುಗೈ ಸಾಧಿಸಿದಂತಾಗಿತ್ತು. ಇದೀಗ ಈ ಸಂಘರ್ಷ ವಿದ್ಯಾವರ್ಧಕ ಸಂಘಕ್ಕೂ ತಲುಪಿದ್ದು, ಚಂದ್ರಕಾಂತ ಬೆಲ್ಲದ ವಿರುದ್ಧ ತೊಡೆತಟ್ಟಲು ಸಿದ್ಧರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net