

ಕಡೂರು: ಬಡವರ ಮನೆ ಬೆಳಗಲಿಕ್ಕಾಗಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಅನುಷ್ಠಾನಗೊಳಿಸಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಮೆಸ್ಕಾಂ ಕಚೇರಿಯಲ್ಲಿ ಮಂಗಳವಾರ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಐದು ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಗೃಹಜ್ಯೋತಿ ಯೋಜನೆ ಬಡ ಕುಟುಂಬಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಭರವಸೆಯಂತೆ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದಾರೆ. 5 ಗ್ಯಾರಂಟಿಗಳಿಂದ ಅಂದಾಜು 52 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಇದನ್ನು ಕಂಡ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸಹಿಸಿಕೊಳ್ಳಲಾಗದೆ ಟೀಕೆ ಮಾಡುತ್ತಿರುವುದು ಬಡವರ ಅಭಿವೃದ್ಧಿ ಅವರಿಗೆ ಬೇಕಿಲ್ಲ ಎಂಬುದು ತೋರ್ಪಡಿಸುತ್ತದೆ ಎಂದು ಹೇಳಿದರು.
ಸರಸ್ವತಿಪುರ, ಚೌಳಹಿರಿಯೂರು, ಎಸ್.ಬಸವನಹಳ್ಳಿ, ಯಳಗೊಂಡನಹಳ್ಳಿಗಳಲ್ಲಿ ಎಂಯುಎಸ್‌ಎಸ್ ಘಟಕ ಪ್ರಾರಂಭಿಸಲಾಗುತ್ತದೆ. ಕಡೂರಿನಲ್ಲಿ ಟ್ರಾನ್ಸ್‌ಫಾರ್ಮರ್ ದುರಸ್ತಿ ಘಟಕ ತೆರೆಯಲು ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಶೂನ್ಯ ವಿದ್ಯುತ್ ಬಿಲ್‌ನ್ನು ಗ್ರಾಹಕರಿಗೆ ನೀಡಿ ಸರ್ಕಾರ ಹಣವನ್ನು ಇಲಾಖೆಗೆ ಭರಿಸಲಿದೆ. ಇದರಿಂದ ಎಲ್ಲ ಸಮುದಾಯಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಪುರಸಭಾ ಸದಸ್ಯ ತೋಟದಮನೆ ಮೋಹನ್‌ಕುಮಾರ್ ಮಾತನಾಡಿ, ಗೃಹಜ್ಯೋತಿ ಯೋಜನೆ ಎಲ್ಲ ಕುಟುಂಬಗಳಿಗೂ ಸಮಾನವಾಗಿ ಇರುವ ಯೋಜನೆ ಎಂದರು.
ಮೆಸ್ಕಾಂ ಉಪವಿಭಾಗದ ಕಾರ್ಯಪಾಲಕ ಅಭಿಯಂತ ಲಿಂಗರಾಜ್ ಮಾತನಾಡಿ, ತಾಲೂಕಿನಲ್ಲಿ ಚಾಲ್ತಿಯಲ್ಲಿರುವ 83,360 ಗ್ರಾಹಕರಲ್ಲಿ 58,859 ಗ್ರಾಹಕರು ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಕಡೂರು ಮೆಸ್ಕಾಂ ಪ್ರಭಾರ ಎಇಇ ಸಿ.ಎನ್.ಮಂಜೇಗೌಡ, ಬೀರೂರು ಎಇಇ ನಂದೀಶ್, ಕುಮಾರ್, ಗ್ರಾಪಂ ಸದಸ್ಯ ಶ್ರೀಕಂಠ ಒಡೆಯರ್, ಪ್ರಸನ್ನ ಇತರರಿದ್ದರು.