

ಶಿವಮೊಗ್ಗ: ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಬೇಕೆಂದು ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಸರ್ಕಾರಕ್ಕೆ ಆಗ್ರಹಿಸಿದರು.
ಕಾಗೋಡು ತಿಮ್ಮಪ್ಪ ಅವರು ಉಳುವವನೇ ಹೊಲದೊಡೆಯ, ವಾಸಿಸುವವನೇ ಮನೆಯೊಡೆಯ ಕಾಯ್ದೆ ಸೇರಿ ವಿವಿಧ ಜನಪರ ಕಾರ್ಯಗಳ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಿರಿಯ ಸಮಾಜವಾದಿಯಾಗಿದ್ದು, ಪ್ರಗತಿಪರ ಚಿಂತಕರಾಗಿದ್ದಾರೆ. ಅವರಿಗೆ ಗೌರವ ಡಾಕ್ಟರೇಟ್ ನೀಡುವುದು ಸೂಕ್ತವಾಗಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಸಚಿವ ಮಧು ಬಂಗಾರಪ್ಪ ಅವರು ಈ ಬಗ್ಗೆ ಗಮನಹರಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಕಾಗೋಡು ತಿಮ್ಮಪ್ಪ ಅವರು ಪ್ರಮುಖವಾಗಿ ಕೃಷಿ ಮತ್ತು ತೋಟಗಾರಿಕೆ ವಿವಿಯ ಹೊಸ ಕ್ಯಾಂಪಸ್ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಾಗರದ ಬಳಿ ಇರುವ ಇರಮಕ್ಕಿಯಲ್ಲಿ 800 ಎಕರೆ ಕಂದಾಯ ಭೂಮಿಯನ್ನು ಗುರುತಿಸಿ ಮತ್ತು ವಿವಿ ಹೊಸ ಕಟ್ಟಡ ಸ್ಥಾಪನೆಗೆ ಶ್ರಮಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ವಿವಿಯೇ ಇವರಿಗೆ ಗೌರವ ಡಾಕ್ಟರೇಟ್ ನೀಡಿದರೆ ಹೆಚ್ಚು ಅರ್ಥಗರ್ಭಿತವಾಗಿರುತ್ತದೆ ಎಂದರು.
ಕಾಗೋಡು ತಿಮ್ಮಪ್ಪ ಅವರು ಪಕ್ಷಾತೀತರು. ರೈತರ ಬದುಕು ಮತ್ತು ಅವರ ಭದ್ರತೆಗೆ ಶ್ರಮಿಸಿದವರು. ಮೆಗ್ಗಾನ್ ಆಸ್ಪತ್ರೆಯ ಉನ್ನತಿಕರಣಕ್ಕೆ ಅವರ ಕೊಡುಗೆ ಇದೆ. ಅನೇಕ ಭೂ ವಿವಾದಗಳನ್ನು ಬಗೆಹರಿಸಿದ್ದಾರೆ ಎಂದರು. ವಕೀಲ ಕೆ.ವೈ.ರಾಮಚಂದ್ರಪ್ಪ, ಪ್ರಮುಖರಾದ ಎಸ್.ಪಿ.ಶೇಷಾದ್ರಿ, ಇಕ್ಕೇರಿ ರಮೇಶ್, ಗಣೇಶ್ ಸುದ್ದಿಗೋಷ್ಠಿಯಲ್ಲಿದ್ದರು.