ರಕ್ತದಾನದಿಂದ ಆರೋಗ್ಯದ ಮೇಲಿಲ್ಲ ದುಷ್ಪರಿಣಾಮ

blood camp
Published on

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ರಕ್ತದಾನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಬೇರೂರಿದೆ. ಇದರಿಂದ ಹೊರಬಂದು ಆರೋಗ್ಯವಂತ ವ್ಯಕ್ತಿಗಳು ರಕ್ತದಾನಕ್ಕೆ ಮುಂದಾಗಿ, ಮಾದರಿಯಾಗಬೇಕು ಎಂದು ಸಮಾಜ ಸೇವಕ ಕಗ್ಗಲಹಳ್ಳಿ ಶಂಕರ್ ತಿಳಿಸಿದರು.
ಹೋಬಳಿಯ ಕಗ್ಗಲಹಳ್ಳಿಯಲ್ಲಿ ಸ್ವಾಮಿ ವಿವೇಕಾನಂದ ಬ್ಲೆಡ್ ಬ್ಯಾಂಕ್ ಹಾಗೂ ಲಯನ್ಸ್ ಕ್ಲಬ್‌ನಿಂದ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಯುವಕರು ರಕ್ತದಾನದ ಕುರಿತ ಮೌಢ್ಯವನ್ನು ದೂರ ಮಾಡಬೇಕು. ರಕ್ತದಾನ ರಕ್ತದ ಅವಶ್ಯಕತೆ ಇರುವವರಿಗೆ ಮಾತ್ರ ಲಾಭ ಆಗುವುದಿಲ್ಲ. ರಕ್ತದಾನಿಗಳಿಗೂ ಆರೋಗ್ಯ ವೃದ್ಧಿಸುತ್ತದೆ. ರಕ್ತದಾನ ಮಾಡಿದ ಕೆಲವೇ ಗಂಟೆಯಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ. ಒಬ್ಬ ದಾನಿಯಿಂದ ಪಡೆದ ರಕ್ತವನ್ನು 35 ದಿನಗಳವರೆಗೆ ಮಾತ್ರ ಉಪಯೋಗಿಸಲು ಸಾಧ್ಯ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುನಿಲ್ ಮಾತನಾಡಿ, ರಕ್ತದಾನದ ಮೂಲಕ ಜೀವ ಉಳಿಸುವ ಪುಣ್ಯದ ಕೆಲಸ ಮಾಡಿದರೆ, ಜೀವನ ಸಾರ್ಥಕವಾಗುತ್ತದೆ. ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ. ಹಾಗಾಗಿ ತುರ್ತು ಪರಿಸ್ಥಿತಿಗಳಲ್ಲಿ ದಾನಿಯಿಂದ ಸ್ವೀಕರಿಸಿದ ರಕ್ತದಿಂದ ರೋಗಿಯ ಜೀವ ಉಳಿಸಲು ಸಾಧ್ಯ. ರಕ್ತದಾನ ಮಾಡುವ ಜತೆಗೆ ಜೀವದಾನಿಗಳಾಗಿ ಎಂದು ಕರೆ ನೀಡಿದರು.
ಗಂಗವಾರ ಚೌಡಪ್ಪನಹಳ್ಳಿ ಗ್ರಾಪಂ ಸದಸ್ಯ ಎಂ.ರಾಜಣ್ಣ ಮಾತನಾಡಿ, ಆರೋಗ್ಯವಂತ ಯುವ ಸಮುದಾಯ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕು ಎಂದರು.
ಶನಿಮಹಾತ್ಮ ದೇವಸ್ಥಾನದ ಧರ್ಮದರ್ಶಿ ಕೆ.ಗೋಪಾಲಯ್ಯ ಮಾತನಾಡಿ, ಈ ದೇಶದಲ್ಲಿ ಅದೆಷ್ಟು ಜನಕ್ಕೆ ರಕ್ತದ ಅವಶ್ಯಕತೆ ಇದೆ. ಅಪಘಾತ ಸಂಭವಿಸಿದವರು, ವಿವಿಧ ಕಾಯಿಲೆಯಿಂದ ಬಳಲುತ್ತಿರುವವರು ಒಂದು ಯೂನಿಟ್ ರಕ್ತಕ್ಕಾಗಿ ಒದ್ದಾಡುತ್ತಿದ್ದಾರೆ. ಇಂಥವರಿಗಾಗಿ ರಕ್ತದಾನ ಮಾಡಬೇಕಾಗಿದೆ. ನಾವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯುನಿಟ್ ಜೀವಗಳನ್ನು ಉಳಿಸಬಲ್ಲದು ಎಂದರು. 100ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net