ಮೋದಿ ಆಡಳಿತದಿಂದ ದೇಶದ ಜನರಲ್ಲಿ ಕೀಳರಿಮೆ ದೂರವಾಗಿದೆ : ಕಾಗೇರಿ

KMT KAGERI
Published on

 ಕಾರವಾರ: ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತದಿಂದ ದೇಶದ ಜನರಲ್ಲಿ ಕೀಳರಿಮೆಯ ಭಾವನೆ ದೂರವಾಗಿ ರಾಷ್ಟ್ರಾಭಿಮಾನ ಜಾಗೃತವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಭಾರತ ಎಂದರೆ ಭಿಕ್ಷಕರಿಂದ ತುಂಬಿದ ಭ್ರಷ್ಟ ಆಡಳಿತ ವ್ಯವಸ್ಥೆ ಇರುವ, ಕೊಳಕು ತುಂಬಿದ ದೇಶ ಎಂಬ ಭಾವನೆ ವಿಶ್ವದ ವಿವಿಧ ರಾಷ್ಟ್ರಗಳ ಜನರಲ್ಲಿತ್ತು. ಕೆಲವು ರಾಷ್ಟ್ರಗಳಲ್ಲಿಯೂ ಭಾರತದ ಪಾಸ್‌ಪೋರ್ಟ್ಗೆ ಬೆಲೆಯೇ ಇರಲಿಲ್ಲ. ಮೋದಿ ಅವರ ಸಮರ್ಥ ನಾಯಕತ್ವದ ಪರಿಣಾಮ ವಿಶ್ವದಲ್ಲಿ ಭಾರತದ ಪ್ರಭಾವ ಬದಲಾಗಿದೆ. ಸ್ವದೇಶಿಕರಣದ ವ್ಯಾಪ್ತಿ ಹೆಚ್ಚಿದೆ. ಭಾರತ ಜಗತ್ತಿನ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ವಿಶ್ವದ ಹಲವು ರಾಷ್ಟ್ರಗಳು ಪ್ರಮುಖ ನಿರ್ಣಯ ತೆಗೆದುಕೊಳ್ಳುವಾಗ ಭಾರತವನ್ನು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಮಾತ್ರವಲ್ಲ ದೇಶದ ಒಳಗೂ ಹೆದ್ದಾರಿ, ವಿಮಾನ ನಿಲ್ದಾಣಗಳು,ಬಂದರುಗಳು ಹೀಗೆ 11 ವರ್ಷಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಬಂದಿದೆ. ಬಡವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಪರಿಣಾಮ ದೇಶದ ಬಗ್ಗೆ ಗೌರವ, ಆತ್ಮ ವಿಶ್ವಾಸ ದೇಶಾಭಿಮಾನ ಇಲ್ಲಿನ ಜನರಲ್ಲೂ ಹೆಚ್ಚಿದೆ ಎಂದರು. ಕೋವಿಡ್‌ನಂಥ ಸಂಕಷ್ಟದ ಪರಿಸ್ಥಿತಿಯಲ್ಲೂ ದೇಶದ ಆರ್ಥಿಕತೆಯನ್ನು ಸಮತೋಲನವಾಗಿಟ್ಟುಕೊಂಡು ವಿಶ್ವಕ್ಕೇ ವ್ಯಾಕ್ಸಿನ್, ಔಷಧಗಳನ್ನು ಪೂರೈಸುವ ಕಾರ್ಯವನ್ನು ಮೋದಿ ಸರ್ಕಾರ ಮಾಡಿತು. ಮೋದಿ ಅವರು ಯಾವುದೇ ತುಷ್ಟೀಕರಣ, ಭೇದ ಭಾವ, ತಾರತಮ್ಯ ಇಲ್ಲದೇ ಆಡಳಿತ ನಡೆಸಿದ್ದು, ದೇಶ ಮೊದಲು, ದೇಶಕ್ಕಾಗಿ ನಾವು ಎಂಬ ನಂಬಿಕೆಯನ್ನು ದೇಶದ 140 ಕೋಟಿ ಜನರಿಗೆ ಕೊಟ್ಟಿದ್ದಾರೆ.ಸ್ವಚ್ಛ ಭಾರತ, ಉಜ್ವಲ ಯೋಜನೆ, ಜನಧನ ಖಾತೆ, ಆಯುಷ್ಮಾನ್ ಭಾರರತ, ಜಲಜೀವನ ಮಿಷನ್ ಮುಂತಾದ ಹಲವು ಯೋಜನೆಗಳಿಂದ ಸರ್ಕಾರ ಜನರಿಗೆ ಹತ್ತಿರವಾಗಿದೆ ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಮಾಜಿ ಶಾಸಕ ಸುನೀಲ ಹೆಗಡೆ, ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ಮಾಜಿ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯ್ಕ, ಎಂ.ಜಿ.ನಾಯ್ಕ, ಕಾರವಾರ ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ, ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ, ಪ್ರಮುಖರಾದ ಸುಬ್ರಾಯ ವಾಳ್ಕೆ, ಸುಭಾಷ ಗುನಗಿ, ನಾಗೇಶ ಕುರ್ಡೇಕರ್, ಇತರರು ಇದ್ದರು.

ಅವರ ರಿಪೋರ್ಟ್ ಕಾರ್ಡ್ ಹೇಳಿದ್ದಾರೆ.

ರಾಜ್ಯ ಸರ್ಕಾರ ತನ್ನೆಲ್ಲ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರದಿAದ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯವಾಗಿಲ್ಲ. ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ರಿಪೋರ್ಟ್ ಕಾರ್ಡ್ ಕೊಟ್ಟಿದ್ದಾರೆ. ತಮ್ಮ ಸರ್ಕಾರಕ್ಕೆ ಅನ್ವಯವಾಗುವ ಶೂನ್ಯ ಅಂಕವನ್ನು ತಪ್ಪಾಗಿ ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದಾರೆ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅಷ್ಟಕ್ಕೂ ಕೇಂದ್ರ ಸರ್ಕಾರದ ಮೌಲ್ಯಮಾಪನ ಮಾಡಲು ಅವರ್ಯಾರು ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net