ಕಾಡುಗೊಲ್ಲ ಸಮುದಾಯದವರು 'ಕಾಡುಗೊಲ್ಲ' ಎಂದು ನಮೂದಿಸಲು ಶಾಸಕ ಡಾ. ಎಂ. ಚಂದ್ರಪ್ಪ ಮನವಿ

22 hlk 1
Published on

ಹೊಳಲ್ಕೆರೆ: ರಾಜ್ಯ ಸರ್ಕಾರವು ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಎಲ್ಲಾ ಕಾಡುಗೊಲ್ಲ ಸಮುದಾಯದವರು ಕಡ್ಡಾಯವಾಗಿ 'ಕಾಡುಗೊಲ್ಲ' ಎಂದು ನಮೂದಿಸಬೇಕು.

ಇದರಿಂದ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಡಾ. ಎಂ. ಚಂದ್ರಪ್ಪ ಮನವಿ ಮಾಡಿದರು. ತಾಲೂಕಿನ ಹಳೆಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಸಮೀಕ್ಷೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗುವ ಅವಕಾಶ

ಕಾಡುಗೊಲ್ಲ ಸಮುದಾಯವು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಈ ಸಮೀಕ್ಷೆಯ ಮೂಲಕ ಪ್ರತಿಯೊಬ್ಬರೂ ತಮ್ಮ ಜಾತಿಯನ್ನು ಸರಿಯಾಗಿ ದಾಖಲಿಸುವುದು ಅತ್ಯಂತ ಮುಖ್ಯ ಎಂದು ಶಾಸಕರು ಒತ್ತಿ ಹೇಳಿದರು.

"ಸಮೀಕ್ಷೆಯಲ್ಲಿ ಕಾಡುಗೊಲ್ಲ ಎಂದು ಬರೆಸಿದರೆ ಪರಿಶಿಷ್ಟ ಪಂಗಡ (ST) ಪಟ್ಟಿಗೆ ಸೇರ್ಪಡೆಯಾಗುವ ಅವಕಾಶವಿದೆ. ಇದು ಸಾಧ್ಯವಾದರೆ ಉದ್ಯೋಗದಲ್ಲಿ ಮೀಸಲಾತಿ, ಶೈಕ್ಷಣಿಕ ಸೌಲಭ್ಯಗಳು ಮತ್ತು ಸಾಲ ಸೌಲಭ್ಯಗಳು ಸುಲಭವಾಗಿ ದೊರೆಯುತ್ತವೆ" ಎಂದು ಅವರು ತಿಳಿಸಿದರು.

ಈ ಮಾಹಿತಿಯನ್ನು ಮನವರಿಕೆ ಮಾಡಿಕೊಡುವುದಕ್ಕಾಗಿಯೇ ಹಳೆಹಳ್ಳಿ ಗೊಲ್ಲರಹಟ್ಟಿಯನ್ನು ಸಮೀಕ್ಷೆಯ ಮೊದಲ ಹಂತಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಕರೆ

ರಾಜ್ಯ ಸರ್ಕಾರವು ಈ ಸಮೀಕ್ಷಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. ಇದರಿಂದ ರಾಜ್ಯ ಮತ್ತು ಕೇಂದ್ರದ ಹಲವು ಯೋಜನೆಗಳು ಸಮುದಾಯದ ಜನರಿಗೆ ತಲುಪಲು ಸಹಾಯವಾಗಲಿದೆ. "ಶಿಕ್ಷಣದಿಂದ ವಂಚಿತರಾಗಿರುವ ನಮ್ಮ ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಮತ್ತು ಯುವಕರು ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಈ ಸಮೀಕ್ಷೆ ದಾರಿದೀಪವಾಗಲಿದೆ" ಎಂದು ಡಾ. ಚಂದ್ರಪ್ಪ ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ವಿಜಯಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಗ್ರಾ.ಪಂ. ಅಧ್ಯಕ್ಷ ಯುವರಾಜ್, ಉಪಾಧ್ಯಕ್ಷೆ ಸರೋಜಮ್ಮ, ಕಸಾಪ ತಾಲೂಕಾಧ್ಯಕ್ಷ ಶಿವಮೂರ್ತಿ, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net