

ಹುಳಿಯಾರು : ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದು ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುತ್ತೇವೆಂದು ಹೇಳಿದ್ದೇನೆ. ಆಶ್ವಾಸನೆ ಕೊಟ್ಟರೆ ಈಡೇರಿಸಲೇಬೇಕು. ಇಲ್ಲವಾದರೆ ಹಕ್ಕುಚ್ಯುತಿ ನಿರ್ಣಯವಾಗುತ್ತದೆ. ಹಾಗಾಗಿ ಜವಾಬ್ದಾರಿಯಿಂದ ಸಾಧಕಬಾಧಕಗಳನ್ನು ಯೋಚಿಸಿಯೇ ಮಾತನಾಡಿದ್ದೇನೆ. ಅದರಂತೆ ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವುದು ಬಿಜೆಪಿಯ ಬದ್ಧತೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರು ಸಮೀಪ ರಾಮಪ್ಪನಹಟ್ಟಿಯಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಕಾಡುಗೊಲ್ಲರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಕಳುಹಿಸಿದ ಮೇಲೆ ದೆಹಲಿಯಲ್ಲಿ ಕಡತ ಬೆನ್ನತ್ತುವವರು ಬೇಕಾಗಿದ್ದಾರೆ. ಕೇಂದ್ರ ಸಚಿವ ಸಂಪುಟಕ್ಕೆ ತೆಗೆದುಕೊಂಡು ಹೋಗುವವರೆಗೂ ನಾನೇ ಯಾರಿಗಾದರೂ ಸೂಚನೆ ಕೊಟ್ಟು ಬೆನ್ನತ್ತಿಸುವ ಕೆಲಸವನ್ನೂ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲೆಯ ಗೊಲ್ಲರು ಗುಡಿಸಲಿನಲ್ಲಿ ವಾಸ ಮಾಡಬಾರದೆಂದು ಗೊಲ್ಲರಿಗಾಗಿಯೇ 12 ಸಾವಿರ ಮನೆ ನೀಡುತ್ತಿದ್ದೇವೆ. ಇದರಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 2600 ಮನೆಗಳು, ಗುಬ್ಬಿಯಲ್ಲಿ 4 ಸಾವಿರ ಮನೆಗಳನ್ನು ನೀಡುತ್ತಿದ್ದೇವೆ. ಸರ್ಕಾರ ಮಾಡಿರುವ ಪಟ್ಟಿಯಲ್ಲಿ ಫಲಾನುಭವಿಗಳ ಹೆಸರು ಬಿಟ್ಟು ಹೋಗಿದ್ದರೂ ನಮ್ಮ ಗಮನಕ್ಕೆ ತಂದರೆ, ಪಟ್ಟಿಯಲ್ಲಿ ಸೇರಿಸಿ ಮನೆ ಗ್ರ್ಯಾಂಟ್ ಕೊಡಿಸುತ್ತೇನೆ ಎಂದರು.
ಗೊಲ್ಲರಹಟ್ಟಿ ಹಾಗೂ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುತ್ತೇವೆ. ಶೀಘ್ರದಲ್ಲೇ ನೋಟಿಫಿಕೇಷನ್ ಹೊರಡಿಸುತ್ತೇವೆ. ಅಲ್ಲದೆ 100 ಕುಟುಂಬದ ರೇಷನ್ ಕಾರ್ಡ್ ಇರುವ ತಾಂಡಾ ಮತ್ತು ಗೊಲ್ಲರಹಟ್ಟಿಯಲ್ಲೇ ನ್ಯಾಯಬೆಲೆ ಅಂಗಡಿ ತೆರೆದು ಪಡಿತರ ವಿತರಿಸಲಾಗುವುದು ಎಂದರಲ್ಲದೆ ಕಾಡುಗೊಲ್ಲ ನಿಗಮ ಮಂಡಳಿಗೆ ಶೀಘ್ರದಲ್ಲೇ ಅಧ್ಯಕ್ಷರನ್ನು ನೇಮಕ ಮಾಡುತ್ತೇವೆ ಎಂದರು.
ದೇವಸ್ಥಾನಕ್ಕಿಂತ ಹೆಚ್ಚಾಗಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಒತ್ತು ನೀಡುತ್ತಿದ್ದು ಗೊಲ್ಲರಹಟ್ಟಿಯ ಎಲ್ಲ ಶಾಲೆಗಳನ್ನು ದುರಸ್ತಿ ಅಥವಾ ಹೊಸದಾಗಿ ಕಟ್ಟಲು ನಿರ್ಧಾರ ಕೈಗೊಂಡಿದ್ದೇನೆ. ಅಲ್ಲದೆ ನನ್ನ ಅನುದಾನದಲ್ಲಿ 1 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಗೊಲ್ಲರಹಟ್ಟಿಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ನೀಡಿದ್ದೇನೆ ಎಂದರು.
ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ, ತುಮಕೂರು ಜಿಲ್ಲಾ ಕಾಡುಗೊಲ್ಲರ ಸಂಘದ ಚಂಗಾವರ ಕರಿಯಣ್ಣ, ಚಿಕ್ಕನಾಯಕನಹಳ್ಳಿ ತಾಲೂಕು ಕಾಡುಗೊಲ್ಲರ ಸಂಘದ ಅಧ್ಯಕ್ಷ ಶಿವಣ್ಣ, ಡಿವೈಎಸ್‌ಪಿ ಬಸವರಾಜು, ತಾಪಂ ಮಾಜಿ ಸದಸ್ಯ ಕೇಶವಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಟಿ.ಚಿಕ್ಕಣ್ಣ, ಜಿಪಂ ಮಾಜಿ ಸದಸ್ಯೆ ಮಂಜುಳಮ್ಮ, ಗ್ರಾಪಂ ಅಧ್ಯಕ್ಷರಾದ ಕೆಎಂಎಲ್ ಕಿರಣ್, ಚಿಕ್ಕಣ್ಣ, ಮುಖಂಡರಾದ ವಿಶ್ವನಾಥ್, ನಿರಂಜನ್, ರಾಮಣ್ಣ, ಮೋಹನ್, ಚಿತ್ತಪ್ಪ, ಈಶರಣ್ಣ, ಬಸವರಾಜು, ಮಹಾಲಿಂಗಯ್ಯ, ಈರಣ್ಣ, ರಮೇಶ್ ಸೇರಿಸಂತೆ ಅನೇಕರು ಉಪಸ್ಥಿತರಿದ್ದರು.
ಸಣ್ಣ ನೀರಾವರಿ ಖಾತೆ ತೆಗೆದರೂ ಚಿಂತೆಯಿಲ್ಲ : ದೊಡ್ಡದೊಡ್ಡ ಖಾತೆ ಕೊಟ್ಟರೂ ಸಣ್ಣ ನೀರಾವರಿ ಖಾತೆಗೆ ಪಟ್ಟು ಹಿಡಿದು ಪಡೆದಿದ್ದೇನೆ. ಈ ಖಾತೆಯ ಮೂಲಕ ಚಿಕ್ಕನಾಯಕನಹಳ್ಳಿ ಕ್ಷೇತ್ರದ 260 ಕೋಟಿ ಹಣ ಮೀಸಲಿಟ್ಟು 180 ಕೆರೆಗಳಿಗೆ ನೀರು ಕೊಡುವ ಕೆಲಸ ಆರಂಭಿಸಿದ್ದೇನೆ. ತಿಪಟೂರು ತಾಲೂಕಿಗೆ 200 ಕೋಟಿ ರೂ. ಕೊಟ್ಟಿದ್ದೇನೆ. ಬೆಳ್ಳಾವಿ, ಕೋರಾದ 70 ಕೆರೆಗೆ ನೀರು ಕೊಡಲು 265 ಕೋಟಿ ರೂ. ಮಂಜೂರು ಮಾಡಿದ್ದೇನೆ. ತುರುವೇಕೆರೆಗೆ 70 ಕೋಟಿ ರೂ. ಕೊಟ್ಟು ಕೆರೆಗಳಿಗೆ ನೀರು ಕೊಡಲು ಧರ್ಮಪುರ ಕೆರೆಗೆ ನೀರು ತರಲು 90 ಕೋಟಿ ರೂ. ಕೊಟ್ಟಿದ್ದೇನೆ. ತುಮಕೂರಿನ 16 ಕೆರೆಗಳನ್ನು ಬೆಂಗಳೂರಿನ ಶುದ್ಧಿಕರಿಸಿದ ನೀರಿನಿಂದ ತುಂಬಿಸಲು 800 ಕೋಟಿ ರೂ. ನೀಡಿದ್ದೇನೆ. ಇಷ್ಟೆಲ್ಲಾ ಮಾಡಿದ ಮೇಲೆ ಈ ಖಾತೆ ಇದ್ದರೇನು ಹೋದರೇನು ಎನ್ನುವ ಸ್ಥಿತಿಗೆ ಬಂದಿದ್ದೇನೆ. ಈಗ ಈ ಖಾತೆ ತೆಗೆದರೂ ಚಿಂತೆಯಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಮಾಧುಸ್ವಾಮಿ ಗುಣಗಾನ : ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಟಿ.ಚಿಕ್ಕಣ್ಣ ಸಚಿವ ಮಾಧುಸ್ವಾಮಿ ಅವರ ಗುಣಗಾನ ಮಾಡಿ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದರು. ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ನೀರು ಹರಿಸಿದ ಭಗೀರಥ, ತಾಲೂಕಿನಲ್ಲಿ ಅನುದಾನ ಹೊಳೆ ಹರಿಸುತ್ತಿರುವ ಧೀಮಂತ ನಾಯಕ ಎಂದರಲ್ಲದೆ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಮುಂದಿನ ದಿನಗಳಲ್ಲಿ ಕಾಡುಗೊಲ್ಲ ಮಾಧುಸ್ವಾಮಿಯಾಗುತ್ತಾರೆ ಎಂದರು.