ಕೋಲಾರ:ಬಿಜೆಪಿಯವರ ಮನಸ್ಥಿತಿ ಎಂಥದ್ದು ಎಂಬುದು ಜನತೆಗೆ ಗೊತ್ತಿದೆ. ಕಾಡುಗಳ್ಳ ವೀರಪ್ಪನ್ ಬಿಜೆಪಿ ವಂಶಸ್ಥನೇ, ಅವರಿಗೆ ಬೇರೊಬ್ಬರನ್ನು ಉದಾಹರಿಸಬೇಕಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ವ್ಯಂಗ್ಯವಾಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಸಳೆ ಕಣ್ಣೀರು ಸುರಿಸುವ, ಕ್ಷುಲ್ಲಕ ಬಿಜೆಪಿ ವ್ಯಕ್ತಿಗಳಿಗೆ ಉತ್ತರ ನೀಡಬೇಕಾದ ಅವಶ್ಯಕತೆ ನನಗಿಲ್ಲ ಎಂದರು. ಕಾಡುಗಳ್ಳ ವೀರಪ್ಪನ್ ಬಿಜೆಪಿಯವರ ವಂಶಸ್ಥರು. ಅದಕ್ಕಾಗಿಯೇ ಬಿಜೆಪಿ ಅಭ್ಯರ್ಥಿಯಾಗಿ ವೀರಪ್ಪನ್ ಮಗಳು ಸ್ಪರ್ಧಿಸಿದ್ದರು. ಅವರನ್ನು ಪಕ್ಷದಲ್ಲಿಟ್ಟುಕೊಂಡು ನಮಗೆ ಯಾಕೆ ಉದಾಹರಣೆ ನೀಡಬೇಕು ಎಂದು ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದರು.
ನೂರಾರು ದಿನಗಳ ಕಾಲ ಜೈಲಲ್ಲಿದ್ದವರು, ಬೇಲ್ ಮೇಲೆ ಇರುವವರು ಬಿಜೆಪಿಯವರು. ಸದ್ಯ ವೀರಪ್ಪನ್ ಮಗಳು ಯಾವ ಪಕ್ಷದಲ್ಲಿದ್ದಾರೆ?, ಬಿಜೆಪಿ ಅಲ್ಲವೇ. ಅಂತಹವರನ್ನು ಪಕ್ಷದ ಅಭ್ಯರ್ಥಿಗಳನ್ನು ಮಾಡಿಕೊಂಡಿರುವ ಬಿಜೆಪಿಯವರಿಗೆ ನಾವು ಯಾಕೆ ಉತ್ತರ ನೀಡಬೇಕು ಎಂದು ಪ್ರಶ್ನೆ ಮಾಡಿದರು.
ವಾಲ್ಮೀಕಿಯು ರಾಮಾಯಣವನ್ನು ಬರೆದೇ ಇಲ್ಲವೆಂದು ಬಿಜೆಪಿಯ ಒಬ್ಬ ಮಹಾನ್ ನಾಯಕರೊಬ್ಬರು ಹೇಳಿಕೆ ನೀಡಿದ್ದಾರೆ ಎಂದರೆ ಅವರ ಮನಸ್ಥಿತಿ ಹೇಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ರಾಜ್ಯ, ದೇಶಕ್ಕೆ ರಾಮ, ಸೀತೆಯ ಗುಣಗಳು ಬಂದರೆ ಉತ್ತಮ ಸಮಾಜ ನಿಮಾರ್ಣವಾಗುತ್ತದೆ ಎಂದರು.
ಮಾಜಿ ಸಚಿವ ನಾಗೇಂದ್ರ ಅವರು ಜಾಮೀನಿನ ಮೇಲೆ ಇದ್ದಾರೆ. ವಾಲ್ಮೀಕಿ ಸಮಾಜದ ಶಾಸಕರಾಗಿರುವ ಅವರು ಭೇಟಿ ಮಾಡಲು ಬಂದಾಗ ಸಿಎಂ ಹೊರಗೆ ಕಳುಹಿಸಲು ಸಾಧ್ಯವಾ?. ಅವರು ಅಪರಾಧಿ ಅಥವಾ ನಿರಪರಾಧಿ ಎನ್ನುವುದನ್ನು ನ್ಯಾಯಾಲಯವು ತೀರ್ಪು ನೀಡಲಿದ್ದು, ವಿಚಾರಣೆೆಯವರೆಗೂ ಕಾಯಬೇಕಿದೆ ಎಂದು ತಿಳಿಸಿದರು.ಮುಡಾ ಅಧ್ಯಕ್ಷ ಮರಿಗೌಡರನ್ನು ರಾಜೀನಾಮೆ ನೀಡುವಂತೆ ಯಾರೂ ಒತ್ತಡ ಹಾಕಿಲ್ಲ. ಹುಷಾರಿಲ್ಲದ ಕಾರಣ ರಾಜೀನಾಮೆ ನೀಡಿದ್ದೇನೆಂದು ಅವರೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬೇರೆಯವರನ್ನು ನೇಮಕ ಮಾಡುತ್ತೇವೆ ಎಂದರು.
ಮಾಜಿಗೆ ಉತ್ತರ ನೀಡುವ ಅಗತ್ಯವಿಲ್ಲ: ವಾಲ್ಮೀಕಿ ಕಟ್ಟಡದ ಜಾಗ ಒತ್ತುವರಿ ತೆರವು ವಿಚಾರವಾಗಿ ಈಗಾಗಲೇ ಚರ್ಚೆ ನಡೆಸಲಾಗಿದೆ. ಸಮಸ್ಯೆ ಕುರಿತಾಗಿ ಇಬ್ಬರನ್ನೂ ಕೂರಿಸಿ ಮಾತನಾಡಿ ಬಗೆಹರಿಸಲಾಗುವುದು. ಈ ಬಗ್ಗೆ ಎಸ್.ಮುನಿಸ್ವಾಮಿಗೆ ಉತ್ತರ ನೀಡುವ ಅಗತ್ಯವಿಲ್ಲ. ಕಾರಣ ಈಗ ಅವರು ಮಾಜಿ ಸಂಸದರಾಗಿದ್ದಾರೆ, ಹಾಲಿ ಸಂಸದರು ಪ್ರಶ್ನೆ ಮಾಡಲಿ, ಉತ್ತರಿಸೋಣ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ತಿಳಿಸಿದರು.
ಕಾಂಗ್ರೆಸ್ ಗೆಲುವು ಖಚಿತ: ರಾಜ್ಯದಲ್ಲಿ ನಡೆಯಲಿರುವ ಮೂರು ಉಪ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ಒಂದೆರಡು ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಾಗಲಿದೆ. ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ವಿಚಾರ ನನಗೆ ಗೊತ್ತಿಲ್ಲ. ಆ ಬಗ್ಗೆ ಹೈಕಮಾಂಡ್ ತೀಮಾರ್ನ ಮಾಡುತ್ತದೆ. ಯಾರೇ ಸ್ಪರ್ಧಿಸಿದರೂ ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯರ ಜನಪ್ರಿಯ ಕಾರ್ಯಕ್ರಮಗಳಿಂದಾಗಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಬೈರತಿ ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.