

ಗಂಗೊಳ್ಳಿ: ಕುಂದಾಪುರ ತಾಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಹೊಸಾಡು ಗ್ರಾಮದ ಕಡುಬಿನ ಕೆರೆ ಎರಡು ದಶಕಗಳಿಂದ ಅಭಿವೃದ್ಧಿ ಕಾಣದೆ ಸೊರಗಿ ಹೋಗಿದೆ. ಕೆರೆಯಲ್ಲಿ ಹೂಳು ತುಂಬಿದ್ದು, 7.7 ಎಕರೆ ವಿಸ್ತೀರ್ಣದ ಕಡುಬಿನ ಕೆರೆ ಬರಡು ಭೂಮಿಯಾಗಿ ಮಾರ್ಪಟ್ಟಿದೆ. ಸುತ್ತಮುತ್ತಲಿನ ಪ್ರದೇಶದ ಜನರ ನೀರಿನ ದಾಹ ತೀರಿಸುತ್ತಿದ್ದ ಕಡುಬಿನ ಕೆರೆ ಅಭಿವೃದ್ಧಿಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೊಪ್ಪರಿಗೆ, ಕಮ್ಮಾರಕೊಡ್ಲು, ಮೂಗಿನಬೈಲು, ಕೋಟೆಮಕ್ಕಿ, ಮೈರ್‌ಮನೆ ಪ್ರದೇಶದ 400 ಎಕರೆಗೂ ಅಧಿಕ ಕೃಷಿ ಭೂಮಿಗಳಿಗೆ ಮತ್ತು ಅಕ್ಕಪಕ್ಕದ 200ಕ್ಕೂ ಹೆಚ್ಚು ಮನೆಗಳಲ್ಲಿನ ಬಾವಿಗಳಲ್ಲಿ ಅಂತರ್ಜಲ ಹೆಚ್ಚಲು ಕಡುಬಿನ ಕೆರೆಯ ನೀರಿನ ಜಲಮೂಲವೇ ಪ್ರಮುಖವಾಗಿದೆ. ಕೆರೆ ನೀರನ್ನು ಆಶ್ರಯಿಸಿ ಈ ಪ್ರದೇಶದಲ್ಲಿ ಕೃಷಿಕರು ಕೃಷಿ ಚಟುವಟಿಕೆ ನಡೆಸುತ್ತಿದ್ದರೆ, ಬಾವಿಗಳಲ್ಲಿ ಸಾಕಷ್ಟು ನೀರು ದೊರೆಯುತ್ತಿದೆ. ಕೆರೆಯಲ್ಲಿ ಅಗಾಧ ಪ್ರಮಾಣದ ಹೂಳು, ಮಣ್ಣು ತುಂಬಿಕೊಂಡಿದ್ದು ಅವಧಿಗೆ ಮುನ್ನವೆ ಕೆರೆ ನೀರು ಬರಿದಾಗುತ್ತಿದ್ದರಿಂದ ಇತ್ತೀಚಿನ ವರ್ಷಗಳಲ್ಲಿ ಕೃಷಿಕರು ಭತ್ತ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಈ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಕೃಷಿ ಭೂಮಿ ಪಾಳು ಬೀಳುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ.
ಕೆರೆ ಹೂಳೆತ್ತಿ ಅಭಿವೃದ್ಧಿಗೊಳಿಸಿ: ಕೆರೆಯ ನೀರನ್ನೇ ಆಶ್ರಯಿಸಿ ಈ ಭಾಗದ ಕೃಷಿಕರು ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತಿದ್ದರು. ಬಿರುಬೇಸಿಗೆಯಲ್ಲೂ ಅಂದರೆ ಮೇ ಅಂತ್ಯದವರೆಗೂ ನೀರಿನಿಂದ ತುಂಬಿರುತ್ತಿದ್ದ ಕಡುಬಿನ ಕೆರೆ ಇತ್ತೀಚಿನ ವರ್ಷಗಳಲ್ಲಿ ಫೆಬ್ರವರಿಯಲ್ಲೇ ಬರಿದಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಅಧೀನಕ್ಕೆ ಒಳಪಟ್ಟ ಈ ಕೆರೆ ಇಲಾಖೆ ಅಧಿಕಾರಿಗಳ ನಿರ್ಲಕ್ಷೃ ಧೋರಣೆಯಿಂದ ಅಭಿವೃದ್ಧಿ ಕಾಣದೆ ಎರಡು ದಶಕಗಳೇ ಆಗಿವೆ ಎಂದು ಹೊಸಾಡು ಗ್ರಾಮದ ಕೃಷಿಕರು ದೂರುತ್ತಾರೆ.
ಶಿಥಿಲಾವಸ್ಥೆಯಲ್ಲಿ ಕೆರೆಯ ದಂಡೆ: ಕೆರೆ ದಂಡೆಯ ಮೇಲೆ ಮುಳ್ಳಿನ ಪೊದೆ, ಗಿಡಗಂಟಿಗಳು , ಬೃಹತ್ ಮರಗಳು ಬೆಳೆದಿದ್ದು ನಡೆದಾಡಲು ಸಾಧ್ಯವಿಲ್ಲ. ದಂಡೆಯ ಎರಡು ಬದಿಯ ಕಲ್ಲುಗಳು ಜಾರಿದ್ದು ಶಿಥಿಲಾವಸ್ಥೆಗೆ ತಲುಪಿದೆ. ಕೆರೆ ದಂಡೆಯನ್ನು ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಹೊಸಾಡು ಗ್ರಾಮದ ಜೀವನಾಡಿಯಾಗಿರುವ ಕಡುಬಿನ ಕೆರೆಯಲ್ಲಿ ತೆರೆದ ಬಾವಿ ನಿರ್ಮಿಸುವ ಹೊಸಾಡು ಗ್ರಾಮ ಪಂಚಾಯಿತಿಯ ನಿರ್ಧಾರವನ್ನು ಸ್ಥಳೀಯರು ಪ್ರಬಲವಾಗಿ ವಿರೋಧಿಸಿದ್ದಾರೆ. ಬಾವಿ ತೋಡಿದರೆ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆ ಮತ್ತು ಮನೆಗಳಲ್ಲಿನ ಬಾವಿಗಳಲ್ಲಿ ಅಂರ್ತಜಲ ಮಟ್ಟ ಕಡಿಮೆಯಾಗುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ.
ಹಲವಾರು ಬಾರಿ ಮನವಿ ಮಾಡಿದ್ದರೂ ಕಡುಬಿನ ಕೆರೆ ಅಭಿವೃದ್ಧಿ ಬಗ್ಗೆ ಯಾರೂ ಮುಂದಾಗುತ್ತಿಲ್ಲ. ಇಲಾಖೆ ನಿರ್ಲಕ್ಷೃ ಧೋರಣೆಯಿಂದ 500 ಎಕರೆಗೂ ಅಧಿಕ ಕೃಷಿ ಭೂಮಿಗೆ ನೀರುಣಿಸುವ ಕಡುಬಿನ ಕೆರೆ ಸೊರಗಿ ಹೋಗಿದೆ. ಇದರಿಂದ ಕೃಷಿ ಭೂಮಿಗಳಿಗೆ ನೀರಿನ ಅಭಾವ ಎದುರಾಗುವ ಮತ್ತು ಸುತ್ತಮುತ್ತಲಿನ ಬಾವಿಗಳಲ್ಲಿ ಅಂರ್ತಜಲ ಮಟ್ಟ ಕುಸಿಯುವ ಸಾಧ್ಯತೆ ಇದೆ. ಇನ್ನಾದರು ಕೆರೆಯ ಹೂಳೆತ್ತಿ ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕು ರಾಘವೇಂದ್ರ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ, ಸ್ಥಳೀಯರು, ಹೊಸಾಡು ಗ್ರಾಮ ನಾಲ್ಕು ಗ್ರಾಮಗಳಿಗೆ ನೀರುಣಿಸುವ ಕಡುಬಿನ ಕೆರೆಯನ್ನು ಸಂಪೂರ್ಣವಾಗಿ ಹೂಳೆತ್ತಿ ಅಭಿವೃದ್ಧಿಪಡಿಸಬೇಕು. ಕೆರೆ ಒತ್ತುವರಿ ತೆರವುಗೊಳಿಸಿ ಕೆರೆ ಸಂರಕ್ಷಿಸಬೇಕು. ಈ ಬಗ್ಗೆ ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಗುರುರಾಜ್ ಗಂಟಿಹೊಳೆ, ಶಾಸಕ https://www.vijayavani.net/birth-centenary-of-sudhindra-theertha-swamiji-2 https://www.vijayavani.net/swimming-is-an-important-lifesaving-skill