ಕದ್ರಿ ಮಂಜುನಾಥ ದೇವಸ್ಥಾನ ಜಾತ್ರೆ ಆರಂಭ

kadri
Published on

ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಮಹೋತ್ಸವ ಗುರುವಾರ ಆರಂಭಗೊಂಡಿತು. ಮುಂಜಾನೆ ನಾಲ್ಕು ಗಂಟೆಯಿಂದಲೇ ನೂರಾರು ಭಕ್ತರು ಕೆರೆಯಲ್ಲಿ ತೀರ್ಥಸ್ನಾನ ಮಾಡಿ ದೇವರ ಧನುಪೂಜೆಯಲ್ಲಿ ಪಾಲ್ಗೊಂಡರು. ಮಕರ ಸಂಕ್ರಾಂತಿ ರಜೆ ಹಿನ್ನೆಲೆಯಲ್ಲಿ ಮಧ್ಯಾಹ್ನ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. ಸಾಯಂಕಾಲ ಏಳುಪಟ್ಣ ಮೊಗವೀರ ಮಹಾಸಭಾದವರಿಂದ ಧ್ವಜಾರೋಹಣ ನಡೆಯಿತು. ಬಳಿಕ ಮಹಾಪೂಜೆ, ಶ್ರೀ ಮಲರಾಯ ದೈವದ ಭಂಡಾರ ಆಗಮನವಾಯಿತು. ರಾತ್ರಿ ಧ್ವಜ ಬಲಿ, ಹತ್ತು ಸಮಸ್ತರಿಂದ ಗರುಡಾರೋಹಣ, ಉತ್ಸವ ಬಲಿ, ಭೂತ ಬಲಿ, ಕಂಚುದೀಪ ಬೆಳಗಿಸುವುದು, ದೀಪದ ಬಲಿ ಉತ್ಸವ, ಮಲರಾಯ ದೈವದ ಭೇಟಿ, ಕಂಚಿಲು ಸೇವೆ ಮತ್ತು ಸಣ್ಣ ರಥೋತ್ಸವ ನೆರವೇರಿತು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಕುಟುಂಬ ಸಮೇತ ಕ್ಷೇತ್ರಕ್ಕೆ ಭೇಟಿ ನೀಡಿ ದೇವರಿಗೆ ತುಪ್ಪದ ದೀಪ ಬೆಳಗಿದರು. ಕಾರ್ಪೊರೇಟರ್ ಶಕೀಲಾ ಕಾವ ಜತೆಗಿದ್ದರು. ಶಾಸಕ ವೇದವ್ಯಾಸ ಕಾಮತ್, ಮೇಯರ್ ದಿವಾಕರ ಪಾಂಡೇಶ್ವರ ಭೇಟಿ ನೀಡಿ ದೇವರ ದರ್ಶನ ಪಡೆದರು. ಕದ್ರಿ ಕಾಲಭೈರವ ಯೋಗೇಶ್ವರ ಮಠದ ಮಹಂತರಸ ಶ್ರೀ ರಾಜಾ ನಿರ್ಮಲ್‌ನಾಥ ಧಾರ್ಮಿಕ ಕಾರ್ಯಕ್ರಮಗಳ ವೇಳೆ ಉಪಸ್ಥಿತರಿದ್ದರು.

ಸಂಕ್ರಾಂತಿ ವಿಶೇಷ ಪೂಜೆ: ಮಕರ ಸಂಕ್ರಮಣ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಗುರುವಾರ ವಿಶೇಷ ಪೂಜೆ ನಡೆಯಿತು. ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ, ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ, ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ಮೊದಲಾದ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಡಿ.16ರಂದು ಧನುರ್ಮಾಸ ಆರಂಭವಾಗಿದ್ದು, ಪ್ರತಿನಿತ್ಯ ಈಶ್ವರ ದೇವಾಲಯಗಳಲ್ಲಿ ಬೆಳಗ್ಗೆ ಧನು ಪೂಜೆಗಳು ನಡೆಯುತ್ತಿದ್ದು, ಈ ಋತುವಿನ ಧನುರ್ಮಾಸದ ಕೊನೆಯ ದಿನ ಮಕರ ಸಂಕ್ರಮಣದಂದು ಧನು ಪೂಜೆ ಕೊನೆಗೊಂಡಿತು. ಹಲವು ಕಡೆ ದೈವಸ್ಥಾನಗಳಲ್ಲಿ ತಂಬಿಲ ಸೇವೆಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net