ಮಲ್ಲಿಕಾ ಬಡಾವಣೆ ಘಮ ಘಮಿಸಿದ ಹಲಸು-ಮಾವು

Mng-june29-halasu2
Published on

ಮಂಗಳೂರು: ವೈವಿಧ್ಯಮಯ ತಳಿಗಳ ಮಾವು ಹಾಗೂ ಹಲಸಿನ ಮಾರಾಟ, ಬಹು ಬಗೆಯ ಹಲಸಿನ ಖಾದ್ಯಗಳು, ಹಲಸಿನ ಹೋಳಿಗೆ, ಐಸ್‌ಕ್ರೀಂ, ಉಪ್ಪಿನಕಾಯಿ, ಹಪ್ಪಳ ಘಮ ಘಮಿಸಿದವು.


ನಾಡು-ನುಡಿ ಜಾಗೃತಿ ಸಮ್ಮೇಳನ ಸರಣಿ ಕಾರ್ಯಕ್ರಮದ ಅಂಗವಾಗಿ ಕಲ್ಕೂರ ಪ್ರತಿಷ್ಠಾನ ವತಿಯಿಂದ ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಯೋಗದೊಂದಿಗೆ ಕದ್ರಿ ಮಲ್ಲಿಕಾ ಬಡಾವಣೆಯಲ್ಲಿರುವ ಮಂಜು ಪ್ರಾಸಾದದ ಆವರಣದಲ್ಲಿ ಗುರುವಾರ ‘ಹಲಸು ಮಾವು ಮೇಳ’ ಆಯೋಜಿಸಲಾಗಿತ್ತು.
ತುಳುನಾಡಿನ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಾವಯವ ಕೃಷಿಕರೇ ಬೆಳೆಸಿರುವ ವಿಶಿಷ್ಟ ತಳಿಗಳ ಸಮೃದ್ಧ ಲಗಳಾದ ಮಾವು-ಹಲಸು ಹಾಗೂ ಅವುಗಳಿಂದ ತಯಾರಿಸಲ್ಪಟ್ಟ ಇತರ ಉತ್ಪನ್ನಗಳನ್ನು ಒಂದೇ ಸೂರಿನಡಿಯಲ್ಲಿ ಪ್ರದರ್ಶಿಸುವ ಹಾಗೂ ಮಾರಾಟ ಮಾಡುವ ವ್ಯವಸ್ಥೆ ಸಾರ್ವಜನಿಕರ ಗಮನ ಸೆಳೆಯಿತು.


ಹಲವು ಹಾಗೂ ಮಾವಿನ ಖಾದ್ಯಗಳ ಜತೆಗೆ ವಿವಿಧ ತಳಿಗಳ ಮಾವು ಹಾಗೂ ಹಲಸಿನ ಗಿಡಗಳ ಮಾರಾಟ, ದೇಸಿ ತರಕಾರಿ ಬೀಜಗಳು, ಸಸಿಗಳು, ಉಪ್ಪಿನಕಾಯಿ, ಹಪ್ಪಳ, ಇತ್ಯಾದಿಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ವಿಶೇಷವಾಗಿತ್ತು. ಸುರಿಯುತ್ತಿರುವ ಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯ ಗ್ರಾಹಕರು ಆಗಮಿಸಿ ಖರೀದಿಯಲ್ಲಿ ತೊಡಗಿರುವುದು ಕಂಡು ಬಂತು.


ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದ ಸ್ವಾಮೀಜಿ ಹಲಸು ಮಾವು ಮೇಳ ಉದ್ಘಾಟಿಸಿದರು. ಮೇಯರ್ ಜಯಾನಂದ ಅಂಚನ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಶರವು ರಾಘವೇಂದ್ರ ಶಾಸೀ, ಹರಿಕೃಷ್ಣ ಪುನರೂರು, ಡಾ.ಎಂ.ಬಿ.ಪುರಾಣಿಕ್, ಡಾ.ಎಂ. ಪ್ರಭಾಕರ ಜೋಶಿ, ರತ್ನಾಕರ ಕುಳಾಯಿ, ಜನಾರ್ದನ ಹಂದೆ, ಕದ್ರಿ ನವನೀತ ಶೆಟ್ಟಿ, ವಿಜಯಲಕ್ಷ್ಮೀ ಬಿ. ಶೆಟ್ಟಿ ಮೊದಲಾದವರಿದ್ದರು.


ಕಾರ್ಯಕ್ರಮದ ಆಯೋಜಕ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಾಸ್ತಾವಿಕ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net