

ಮಂಗಳೂರು: ಶ್ರೀ ಕೃಷ್ಣಾಷ್ಟಮಿ ಅಂಗವಾಗಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಸೆ.6ರಂದು ರಾಷ್ಟ್ರಮಟ್ಟದ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ.
ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಗಣ್ಯರು, ಪುಟಾಣಿ ಕೃಷ್ಣರು, ಮಾತೆಯರ ಸಮ್ಮುಖದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆ ಉದ್ಘಾಟನೆಗೊಳ್ಳಲಿದೆ ಎಂದು ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 9ರಿಂದ ರಾತ್ರಿ 9ರ ತನಕ ವಿವಿಧ ಸ್ಪರ್ಧೆಗಳನ್ನು ಒಟ್ಟು 41 ವಿಭಾಗಗಳಲ್ಲಿ, 9 ವೇದಿಕೆಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ. ಮಧ್ಯಾಹ್ನ 12ರಿಂದ ರಾತ್ರಿ 12ರ ತನಕ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಉತ್ಸವದಲ್ಲಿ ಆಯೋಜಿಸಲಾಗಿದೆ. ರಾತ್ರಿ 12 ಗಂಟೆಗೆ ಆರ್ಘ್ಯ ಪ್ರದಾನ, ಪ್ರಸಾದ ವಿತರಣೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.
ವಿಭಾಗಗಳು: ತೊಟ್ಟಿಲ ಕೃಷ್ಣ, ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ಗೀತಾ ಕೃಷ್ಣ, ರಾಧಾಕೃಷ್ಣ, ಯಶೋಧಕೃಷ್ಣ, ಸಾಂಪ್ರದಾಯಿಕ ಉಡುಗೆಯೊಂದಿಗೆ ಶಂಖನಾದ, ಸಾಂಪ್ರದಾಯಿಕ ಉಡುಗೆಯೊಂದಿಗೆ ಶಂಖ ಉದ್ಘೋಷ, ದೇವಕಿ ಕೃಷ್ಣ, ಯಶೋದ ಕೃಷ್ಣ (ಮುಕ್ತ ವಿಭಾಗ), ವಸುದೇವ ಕೃಷ್ಣ, ರಾಧಾ ಕೃಷ್ಣ (ಜೋಡಿ), ಯಕ್ಷ ಕೃಷ್ಣ, ನಂದಗೋಕುಲ (ಸಮೂಹ ವಿಭಾಗ), ಬಾಲಕೃಷ್ಣ ರಸಪ್ರಶ್ನೆ, ಶ್ರೀಕೃಷ್ಣ ರಸಪ್ರಶ್ನೆ, ಛಾಯಾ ಕೃಷ್ಣ, ಶ್ರೀ ಕೃಷ್ಣ ವರ್ಣ ವೈಭವ, ಶ್ರೀ ಕೃಷ್ಣ ಗಾನ ವೈಭವ, ಅಚ್ಚುತ ರಸಪ್ರಶ್ನೆ, ಮಾಧವ ರಸಪ್ರಶ್ನೆ, ಕೇಶವ ರಸಪ್ರಶ್ನೆ, ಕೃಷ್ಣ ಕವನ, ಕೃಷ್ಣ ಗೀತೆ ನಡೆಯಲಿದೆ. ಈ ಬಾರಿ ಯಕ್ಷ ಕೃಷ್ಣನಿಗೆ ಹಿಮ್ಮೇಳದ ವ್ಯವಸ್ಥೆ ಮಾಡಲಾಗಿದೆ.
ಇಂದು ಶಾರದಾ ವಿದ್ಯಾಲಯದಲ್ಲಿ ಸ್ಪರ್ಧೆ
ಕೊಡಿಯಾಲಬೈಲ್ ಶಾರದಾ ವಿದ್ಯಾಲಯದಲ್ಲಿ ಸೆ.3ರಂದು ಬೆಳಗ್ಗೆ 9ರಿಂದ ಶ್ರೀ ಕೃಷ್ಣ ಗಾನ ವೈಭವ, ರಂಗೋಲಿಯಲ್ಲಿ ಶ್ರೀ ಕೃಷ್ಣ (ಸಾಂಪ್ರದಾಯಿಕ ಚುಕ್ಕಿ ರಂಗೋಲಿ), ರಂಗೋಲಿಯಲ್ಲಿ ಶ್ರೀ ಕೃಷ್ಣ (ಸರಳ ಕೈ ಶೈಲಿ), ಪಂಡರಾಪುರ ವಿಠಲ (ಮುಕ್ತ ವಿಭಾಗ), ಆನ್‌ಲೈನ್ ವಿಭಾಗ ವೃಕ್ಷ ಕೃಷ್ಣ, ಗೋಪಾಲಕೃಷ್ಣ ಸ್ಪರ್ಧೆಗಳು ನಡೆಯಲಿದೆ.
ಭಾಗವಹಿಸುವ ಎಲ್ಲ ಸ್ಪರ್ಧಾಳುಗಳಿಗೆ ಉಡುಪಿ ಕಡೆಗೋಲು ಕೃಷ್ಣನ ಪಂಚಲೋಹದ ವಿಗ್ರಹ, ಶ್ರೀ ಕೃಷ್ಣ ಚರಿತ್ರೆ, ಕದ್ರಿ ಶ್ರೀ ಮಂಜುನಾಥ ದೇವರ ಭಾವಚಿತ್ರ, ಪ್ರೋತ್ಸಾಹಕರಿಂದ ನೀಡಲ್ಪಟ್ಟ ಇತರ ಉಡುಗೊರೆಗಳು ಹಾಗೂ ಪ್ರಶಂಸನಾ ಪತ್ರ ಮತ್ತು ಶ್ರೀಮದ್‌ಭಗವದ್ಗೀತೆ ಪ್ರತಿ ನೀಡಲಾಗುವುದು. ಎಲ್ಲ ವಿಭಾಗದ ವಿಜೇತರಿಗೆ ಉಡುಗೊರೆ ಜತೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಸ್ಪರ್ಧಾ ಸ್ಥಳದಲ್ಲೇ ನೊಂದಾಯಿಸಲು ಅವಕಾಶವಿದೆ. ಯಾವುದೇ ಶುಲ್ಕ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ 9845083736, 9448545578ಗೆ ಸಂಪರ್ಕಿಸಬಹುದು ಎಂದು ಕಲ್ಕೂರ ತಿಳಿಸಿದ್ದಾರೆ.
ಸಮಿತಿ ಸಂಚಾಲಕರಾದ ಕದ್ರಿ ನವನೀತ ಶೆಟ್ಟಿ, ರತ್ನಾಕರ ಜೈನ್, ದಯಾನಂದ ಕಟೀಲ್, ಸುಧಾಕರ ರಾವ್ ಪೇಜಾವರ, ಪ್ರಭಾಕರ ರಾವ್ ಪೇಜಾವರ, ಜನಾರ್ದನ ಹಂದೆ, ಮಂಜುಳಾ ಶೆಟ್ಟಿ, ವಿಜಯಲಕ್ಷ್ಮೀ ಶೆಟ್ಟಿ, ಸಮೀರ್ ಪುರಾಣಿಕ್, ಪೂರ್ಣಿಮ ರಾವ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.