ಕದ್ರಿ ಸರ್ಕೀಟ್ ಹೌಸ್ ಹಿಂಭಾಗದ ಗುಡ್ಡ ಮತ್ತೆ ಕುಸಿತ ಭೀತಿ

batta
Published on

ಮಂಗಳೂರು: ನಗರದ ಸರ್ಕೀಟ್ ಹೌಸ್ ಹಿಂಭಾಗದ ಗುಡ್ಡ ಕಳೆದ ನಾಲ್ಕೈದು ವರ್ಷಗಳಿಂದ ಪ್ರತೀ ಮಳೆಗಾಲದಲ್ಲಿ ಕುಸಿದು ಬೀಳುತ್ತಿದ್ದು, ಸದ್ಯ ಅಪಾಯದ ಸ್ಥಿತಿಯಲ್ಲಿದೆ. ಈಗಾಗಲೇ ಶಿಥಿಲಗೊಂಡು ಮಣ್ಣು ಫುಟ್‌ಪಾತ್ ಮೇಲೆ ಬಿದ್ದಿದ್ದು, ಇಲ್ಲಿ ನಡೆದುಕೊಂಡು ಹೋಗಲು ಭಯಪಡುವಂತಾಗಿದೆ.


ಸರ್ಕೀಟ್ ಹೌಸ್‌ನಿಂದ ಬಿಜೈ ಕಡೆಗೆ ಹೋಗುವ ರಸ್ತೆಯ ಎಡ ಭಾಗದ ಗುಡ್ಡದ ಮಣ್ಣು ವರ್ಷದಿಂದ ವರ್ಷಕ್ಕೆ ಶಿಥಿಲವಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ಮಣ್ಣು ಕುಸಿದು ರಸ್ತೆಗೆ ಬೀಳುತ್ತಿದೆ. ಈ ಹಿಂದೆ ಮಣ್ಣು ಕುಸಿತವಾದ ಸ್ಥಳದಲ್ಲಿ ಮರಳು ಚೀಲ ಅಳವಡಿಸಿ ತಾತ್ಕಾಲಿಕ ಪರಿಹಾರ ಮಾಡಲಾಗಿದೆ. ಈ ವರ್ಷ ಇನ್ನೊಂದು ಕಡೆ ಮತ್ತೆ ಕುಸಿತವಾಗಲು ಆರಂಭವಾಗಿದೆ. ನಿರಂತರ ಮಳೆಯಾಗುವ ಸಂದರ್ಭ ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿ.


ರಸ್ತೆಯ ಮೇಲ್ಭಾಗದಲ್ಲಿ ಸರ್ಕೀಟ್ ಹೌಸ್ ಕಟ್ಟಡ ಹಾಗು ಆವರಣ ಗೋಡೆ ಇದೆ. ಪ್ರತಿ ದಿನ ಬೆಳಗ್ಗೆಯಿಂದ ರಾತ್ರಿ ತನಕ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಗುಡ್ಡದ ಮಣ್ಣು ಕುಸಿದರೆ ಒಂದು ಭಾಗದ ರಸ್ತೆ ಮುಚ್ಚಿ ಹೋಗುವ ಸಾಧ್ಯತೆ ಇದೆ. ಈ ಸಂದರ್ಭ ವಾಹನಗಳು ಅದರಡಿ ಸಿಲುಕಿದರೆ ಅಪಾಯ ಎದುರಾಗಲಿದೆ. ಬೇಸಗೆ ಕಾಲದಲ್ಲಿ ಕಾಮಗಾರಿ ನಡೆಸಬೇಕಾಗಿದೆ. ಮಳೆಗಾಲದಲ್ಲಿ ಮಣ್ಣು ಶಿಥಿಲವಾಗುತ್ತಿದೆ.

ಸಾಯಿಲ್ ನೇಯ್ಲಿಂಗ್ ಪರಿಹಾರ: ಬೇಸಿಗೆಯಲ್ಲಿ ಸಾಯಿಲ್ ನೇಯ್ಲಿಂಗ್ ತಂತ್ರಜ್ಞಾನ ಅಳವಡಿಕೆಯೊಂದೇ ಇದಕ್ಕೆ ಶಾಶ್ವತ ಪರಿಹಾರವಾಗಿದೆ. ಈ ತಂತ್ರಜ್ಞಾನದ ಮೂಲಕ ಮಣ್ಣು ಕುಸಿಯದಂತೆ ತಡೆಗಟ್ಟಬಹುದಾಗಿದೆ. ಕುಲಶೇಖರದ ಬಳಿ ಪಡೀಲ್ ಕಡೆಗೆ ಹೋಗುವ ಮರೋಳಿಯಲ್ಲಿ ರಸ್ತೆ ಬದಿ ಹಾಗು ನ್ಯಾಯಾಲಯಕ್ಕೆ ಹೋಗುವ ಕಾಂಕ್ರೀಟ್ ರಸ್ತೆ ಬದಿಯಲ್ಲಿ ಈ ತಂತ್ರಜ್ಞಾನ ಅಳವಡಿಸಿ ಮಣ್ಣು ಕುಸಿಯದಂತೆ ಮಾಡಲಾಗಿದೆ. ಅದೇ ಮಾದರಿಯಲ್ಲಿ ಸರ್ಕೀಟ್ ಹೌಸ್ ಬಳಿಯೂ ಸಾಯಿಲ್ ನೇಯ್ಲಿಂಗ್ ಮಾಡುವುದರಿಂದ ಗುಡ್ಡ ಕುಸಿತಕ್ಕೆ ತಡೆ ನೀಡಬಹುದು.

ಸ್ಮಾರ್ಟ್‌ಸಿಟಿಯಿಂದ ಅವಕಾಶ: ಗುಡ್ಡ ಕುಸಿತಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಸ್ಮಾರ್ಟ್‌ಸಿಟಿ ಅನುದಾನ ಬಳಸಲು ಅವಕಾಶವಿದೆ. ನಗರದಲ್ಲಿ ಅನಾವಶ್ಯಕ ಕಾಮಗಾರಿ ನಡೆಸಿ ದುಂದು ವೆಚ್ಚ ಮಾಡುವ ಬದಲು ಇಂತಹ ಉಪಯುಕ್ತ ಕಾಮಗಾರಿಗಳಿಗೆ ವಿನಿಯೋಗಿಸಬಹುದಿತ್ತು. ಇದರಿಂದ ಸಾರ್ವಜನಿಕರಿಗೆ ಉಪಯೋಗವಾಗುತ್ತಿತ್ತು ಎಂದು ಸಾಮಾಜಿಕ ಕಾರ್ಯಕರ್ತ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.

ಕದ್ರಿ ಸರ್ಕೀಟ್ ಹೌಸ್ ಹಿಂಭಾಗದ ಗುಡ್ಡ ಕುಸಿತ ಗಮನಕ್ಕೆ ಬಂದಿದೆ. ಅಲ್ಲಿ ಶಾಶ್ವತ ಪರಿಹಾರ ಕಲ್ಪಿಸಲು ಹೆಚ್ಚಿನ ಅನುದಾನ ಬೇಕಾದ ಕಾರಣ ಸರ್ಕಾರದಿಂದ ಒದಗಿಸಬೇಕು. ಶಾಸಕರ ಮೂಲಕ ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ.
ಜಯಾನಂದ ಅಂಚನ್
ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net