ತ್ಯಾಜ್ಯ ನಿರ್ವಹಣಾ ಶುಲ್ಕ ಪಾವತಿಗೂ ಬಂತು ಕ್ಯೂ.ಆರ್​. ಕೋಡ್​

udp-6-QR code
Published on

ಉಡುಪಿ: ಡಿಜಿಟಲೀಕರಣ ಪ್ರಭಾವದಿಂದ ಎಲ್ಲಾ ವಸ್ತು ಮತ್ತು ಸೇವೆಗಳು ಆನ್​ ಲೈನ್​ ಮೂಲಕ ಮನೆ ಬಾಗಿಲಿಗೆ ಬರುತ್ತಿದ್ದು, ವಿದ್ಯುತ್​, ಗ್ಯಾಸ್, ಕೇಬಲ್​ ಶುಲ್ಕ , ಬಸ್​. ರೈಲು. ವಿಮಾನ ಬುಕ್ಕಿಂಗ್​ ಸೇರಿದಂತೆ ದೈನಂದಿನ ಹಲವು ವಹಿವಾಟುಗಳನ್ನು ನಗದುರಹಿತವಾಗಿ ಮನೆಯಿಂದಲೇ ನಿರ್ವಹಿಸಬಹುದಾಗಿದೆ. ಈಗ ಮನೆ ಮನೆಯಿಂದ ಕಸ ಸಂಗ್ರಹ ಶುಲ್ಕವನ್ನೂ ಸಹ ಕ್ಯೂಆರ್​ ಕೋಡ್​ ಮೂಲಕ ಪಾವತಿಸುವ ವಿನೂತನ ಸೌಲಭ್ಯವನ್ನು ಕಾಡೂರು-ನಡೂರು ಗ್ರಾಮ ಪಂಚಾಯಿತಿಯಲ್ಲಿ ಪರಿಚಯಿಸಲಾಗಿದೆ.

ಕಾಡೂರು -ನಡೂರಿನಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿಗೊಂಡು 5 ವರ್ಷಗಳಾಗಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಗಳಿಂದ ಪ್ರತಿದಿನ ಸಂಗ್ರಹಿಸುವ ಘನ ಸಂಪನ್ಮೂಲ ನಿರ್ವಹಣಾ ಘಟಕದ ಶುಲ್ಕವನ್ನು ಪಾವತಿಸಲು ಕ್ಯೂ ಆರ್​ ಕೋಡ್​ ಮತ್ತು ಸ್ಕ್ಯಾನರ್​ ಅಳವಡಿಸಿ, ನಗದುರಹಿತ ಶುಲ್ಕ ಪಾವತಿ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ 5000 ಜನಸಂಖ್ಯೆಯಿದ್ದು, 1106 ಕುಟುಂಬಗಳು, 36 ಅಂಗಡಿ , ವಾಣಿಜ್ಯ ಸಂಕೀರ್ಣ ಗಳಿದ್ದು ಪ್ರತಿ ತಿಂಗಳು 12 ರಿಂದ 16 ಟನ್​ ಒಣ ತ್ಯಾಜ್ಯ ನಿರ್ವಹಣೆ ನಡೆಯುತ್ತಿದೆ.

ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳು ಒಂದಕ್ಕೊಂದು ಬಹಳ ದೂರದಲ್ಲಿದ್ದು ,ಪ್ರತಿದಿನ ಕಸ ಸಂಗ್ರಹ ವ್ಯವಸ್ಥೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ಆದರೆ ಕಸ ಸಂಗ್ರಹಣೆಯ ಶುಲ್ಕ ಪಾವತಿ ಸಮಯದಲ್ಲಿ ಮನೆಗಳಿಗೆ ಭೇಟಿ ನೀಡಲು ತುಂಬಾ ಕಷ್ಟಕರವಾಗಿದ್ದು, ಶುಲ್ಕ ಸಂಗ್ರಹಣೆಗೆ ತೆರಳಿದ ದಿನ , ಇವತ್ತು ಹಣ ಇಲ್ಲ , ನಾಳೆ ಅಥವಾ ಮತ್ತೊಮ್ಮೆ ಬನ್ನಿ ಎಂದರೆ ಪುನ: ಆ ಮನೆಗಳಿಗೆ ಸಕಾಲದಲ್ಲಿ ತೆರಳುವುದು ಸಾದ್ಯವಾಗುತ್ತಿರಲಿಲ್ಲ. ಅಲ್ಲದೇ ಶುಲ್ಕ ಸಂಗ್ರಹಣೆಯ ಸಿಬ್ಬಂದಿ ಕೊರತೆ ಸಹ ಇತ್ತು. ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಆಲೋಚನೆಯಲ್ಲಿ ಕ್ಯೂ ಆರ್​ ಕೋಡ್​ ವ್ಯವಸ್ಥೆ ಮೂಲಕ ಶುಲ್ಕ ಪಾವತಿ ಮಾಡುವ ಕುರಿತು ಗ್ರಾಮಸ್ಥರ ಮನ ಒಲಿಸಿದ ಪರಿಣಾಮ ಈ ಯೋಜನೆ ಯಶಸ್ವಿಯಾಗಿ ಜಾರಿಗೊಂಡು, ನಗದು ರಹಿತ ಶುಲ್ಕ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.

ಈ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಪಂ ಎಲ್ಲಾ ವಾರ್ಡ್​ವಾರು ಎಲ್ಲಾ ಮನೆಗಳ ಮೊಬೈಲ್​ ಸಂಖ್ಯೆಗಳ ವಾಟ್ಸಪ್​ ಗ್ರೂಫ್​ ರಚಿಸಲಾಗಿದ್ದು, ಸಂಬಂದಿಸಿದ ವಾರ್ಡ್​ ಸದಸ್ಯರು ಸಹ ಇದರಲ್ಲಿ ನೊಂದಣಿಯಾಗಿದ್ದು, ಮೇಲ್ವಿಚಾರಣೆಯ ನಡೆಸುವುದು ವಿಶೇಷವಾಗಿದೆ. ಪ್ರತಿ ತಿಂಗಳ ಶುಲ್ಕದ ವಿವರಗಳನ್ನು ಕ್ಯೂ ಆರ್​ ಕೋಡ್​ ಮತ್ತು ಸ್ಕ್ಯಾನರ್​ ಮೂಲಕ ವಾಟ್ಸಾಪ್​ ಗ್ರೂಪ್​ ಗಳಿಗೆ ಕಳುಹಿಸಲಾಗುತ್ತಿದ್ದು, ಗ್ರಾಮಸ್ಥರೂ ಸಹ ಈ ವ್ಯವಸ್ಥೆಗೆ ಉತ್ತಮ ಸ್ಪಂದನೆ ತೋರಿದ್ದಾರೆ. ಗ್ರಾಮದ ಹಲವು ಮನೆಗಳಲ್ಲಿ ದುಡಿಯುವ ವ್ಯಕ್ತಿ ಬೇರೆ ಊರಿನಲ್ಲಿರುವವರು ಅಲ್ಲಿಂದಲೇ ತಮ್ಮ ಮನೆಯ ಶುಲ್ಕವನ್ನು ಪಾವತಿ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net