ಮಾ. 24ರಂದು ಕಡಿಯಾಳಿ ದೇವಸ್ಥಾನದ ಧ್ವಜಸ್ತಂಭ ಪ್ರತಿಷ್ಠೆ

UDP-15-KADIYALI
Published on

ಉಡುಪಿ: ಸುಮಾರು 1500 ವರ್ಷಗಳ ಇತಿಹಾಸವಿರುವ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಾ.22 ರಿಂದ 24ರ ತನಕ ನೂತನ ಧ್ವಜ ಸ್ತಂಭ ಪ್ರತಿಷ್ಠೆ ಮತ್ತು ಧೂಳಿ ಮಂಡಲ ಸೇವೆ ಜರಗಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ಡಾ. ಕಟ್ಟೆ ರವಿರಾಜ ವಿ. ಆಚಾರ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಾ. 21ರಂದು ಸಾಯಂಕಾಲ 4 ಗಂಟೆಗೆ ಕೃಷ್ಣ ಮಠದಿಂದ ಹಸಿರು ಹೊರೆ ಕಾಣಿಕೆ ಚಾಲನೆ ಸಮರ್ಪಿಸಲಾಗುವುದು. ಮಾ. 22ರಿಂದ ಪ್ರತಿದಿನ ಸಾಯಂಕಾಲ 5.30 ರಿಂದ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾ.24ರಂದು ಬೆಳಿಗ್ಗೆ 7 ಗಂಟೆಗೆ ಧ್ವಜಪ್ರತಿಷ್ಠೆ, ಕಲಶಾಭಿಷೇಕ, 9.45ಕ್ಕೆ ವೃಷಭ ಲಗ್ನ ಸುಮೂರ್ತದಲ್ಲಿ ದೇವಿಗೆ ಬ್ರಹ್ಮಕಲಶಾಭಿಷೇಕ, ತದನಂತರ ಮಧ್ಯಾಹ್ನ ಸುಮಾರು 35000 ಸಾವಿರ ಜನರಿಗೆ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 9ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೂಪರ್ ಹಿಟ್ ನಾಟಕ ಶಾಂಭವಿ ಪ್ರದರ್ಶನ ನಡೆಯಲಿದೆ ಎಂದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾಗೇಶ್ ಹೆಗ್ಡೆ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಮಾತನಾಡಿದರು. ದೇಗುಲದ ಪ್ರಧಾನ ಅರ್ಚಕ ಕಡಿಯಾಳಿ ರತ್ನಾಕರ ಉಪಾಧ್ಯ, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಸತೀಶ್ ಕುಲಾಲ್, ಹಸಿರು ಹೊರೆ ಕಾಣಿಕೆ ಸಮಿತಿಯ ಅಧ್ಯಕ್ಷ ಭಾಸ್ಕರ್ ಶೇರಿಗಾರ್, ವ್ಯವಸ್ಥಾಪನ ಮಂಡಳಿಯ ಸದಸ್ಯ ಮಂಜುನಾಥ್ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net