

ಉಡುಪಿ: ಯಕ್ಷಗಾನ ಕೇವಲ ಮನೋರಂಜನೆಗಾಗಿ ಇರುವ ಕಲೆಯಲ್ಲ. ಅದರಿಂದ ವ್ಯಕ್ತಿತ್ವದ ವಿಕಸನವಾಗುತ್ತದೆ. ಯಕ್ಷಗಾನ ಕಲಾವಿದರನ್ನು ಸನ್ಮಾನಿಸುವುದು ಪುಣ್ಯಪ್ರದ ಕಾರ್ಯವಾಗಿದೆ. ಯಕ್ಷಗಾನದ ಬೆಳವಣಿಗೆಯಲ್ಲಿ ಪ್ರೇಕ್ಷಕರು ಕಲಾವಿದರಷ್ಟೆ ಮುಖ್ಯ ಎಂದು ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ಶನಿವಾರ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜರಗಿದ ಸರ್ಪಂಗಳ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯ ಸ್ತ್ರೀವೇಷಧಾರಿ ಅಂಬಾಪ್ರಸಾದ್ ಪಾತಾಳ ಅವರಿಗೆ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಯಕ್ಷಗಾನ ಕಲಾಸಾಧಕ ಪ್ರಶಸ್ತಿ ಮತ್ತು ಚತುರ ಚಕ್ರತಾಳ ವಾದಕ ಬೆಳ್ತಂಗಡಿ ಕೃಷ್ಣ ಶೆಟ್ಟಿ ಅವರಿಗೆ ಸರ್ಪಂಗಳ ಯಕ್ಷಗಾನ ಕಲಾಸೇವಾ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರು ಯಕ್ಷಗಾನವೂ ಸೇರಿದಂತೆ ಎಲ್ಲ ಕಲೆಗಳನ್ನು ಸದ್ದಿಲ್ಲದೆ ಪ್ರೋತ್ಸಾಹಿಸುತ್ತ ಬಂದವರು. ಅವರು ಮಾಡಿದ ಸತ್ಕಾರ್ಯಗಳಿಂದಾಗಿ ಅವರ ನೆನಪು ಈಗಲೂ ನಮ್ಮ ನಡುವೆ ಜೀವಂತವಾಗಿದೆ ಎಂದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಸರ್ಪಂಗಳ ಯಕ್ಷೋತ್ಸವದ ಆಯೋಜಕಿ ನಳಿನಿ ಸುಬ್ರಹ್ಮಣ್ಯ ಭಟ್, ಡಾ. ಶೈಲಜಾ ಎಸ್., ಡಾ. ನರೇಂದ್ರ ಶೆಣೈ, ಅನಿರುದ್ಧ, ಆವಂತಿಕಾ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ತೆಂಕು ತಿಟ್ಟಿನ ಪ್ರಸಿದ್ಧ ಕಲಾವಿದರಿಂದ "ಸಹಸ್ರಕರ" ಯಕ್ಷಗಾನ ಪ್ರಸ್ತುತಗೊಂಡಿತು.