ಚಾಮುಂಡಿಬೆಟ್ಟ ತಪ್ಪಲಿನಲ್ಲಿ ಬೃಹತ್ ವಸತಿ ಸಮುಚ್ಛಯ ನಿರ್ಮಾಣಕ್ಕೆ ಕಡಿವಾಣ ಅವಶ್ಯಕ

Chamundi hill 1
Published on

ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ವಸತಿ ಸಮುಚ್ಛಯ ಕಾಮಗಾರಿ ನಿಲ್ಲಿಸಬೇಕು ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ಆರ್.ರಘು ಕೌಟಿಲ್ಯ ಆಗ್ರಹಿಸಿದ್ದಾರೆ.

ಚಾಮುಂಡಿಬೆಟ್ಟ ಚಾಮುಂಡೇಶ್ವರಿಯ ನೆಲೆಯಾಗಿದ್ದು, ಸುಂದರ ಪ್ರಕೃತಿಯು ಬೆಟ್ಟವನ್ನು ಆವರಿಸಿದೆ. ಇತ್ತೀಚಿಗೆ ಬೆಟ್ಟದ ಅಸ್ತಿತ್ವಕ್ಕೆ ಗಂಡಾಂತರ ತರುವ ರೀತಿಯಲ್ಲಿ ಕಾಂಕ್ರಿಟ್ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ. ಬೆಟ್ಟದ ಸುತ್ತಮುತ್ತ ಅಭಿವೃದ್ಧಿಗೆ ಕಡಿವಾಣ ಹಾಕದೆ ಇದ್ದರೆ ಕೊಡಗು ಹಾಗೂ ಕೇರಳ ಮಾದರಿಯಲ್ಲಿ ಇಲ್ಲೂ ಸಹ ಭೂ ಕುಸಿತ ಸಂಭವಿಸುವ ಆತಂಕ ಇದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

ಚಾಮುಂಡಿ ಬೆಟ್ಟವನ್ನು ಸಂರಕ್ಷಿಸಬೇಕೆಂದು ಸರ್ಕಾರ ಈಗಾಗಲೇ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಈ ಬಗ್ಗೆ ತಕರಾರುಗಳು ಏನೇ ಇರಬಹುದು. ಆದರೆ, ಈ ಪ್ರಾಧಿಕಾರದ ಮೂಲಕ ಇಡೀ ಬೆಟ್ಟದ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿ ಅದರ ಸುತ್ತಮುತ್ತ ಕನಿಷ್ಠ 3 ಕಿ.ಮೀ. ಸುತ್ತಳತೆಯಲ್ಲಿ ಯಾವುದೇ ಕಟ್ಟಡಗಳು ತಲೆ ಎತ್ತದಂತೆ ತುರ್ತು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net