

ಗೋಕರ್ಣ: ಇಲ್ಲಿನ ಶ್ರೀ ಮಹಾಬಲೇಶ್ವರ ಮಂದಿರದಲ್ಲಿನ ವಾರ್ಷಿಕ ಕದಿರು ಹಬ್ಬ ಅಥವಾ ಹೊಸ್ತು ಹಬ್ಬ ಅ. 5 ರಂದು ನಡೆಯಲಿದೆ. ತನ್ನಿಮಿತ್ತ ಶ್ರೀ ದೇವರ ಪಲ್ಲಕ್ಕಿ ಉತ್ಸವ ಸವಾರಿ ಅ. 4ರಂದು ರಾತ್ರಿ ಬಂಕಿಕೊಡ್ಲದ ಮಿರ್ಜಾನ್ ಸೀಮೆಯ ನಾಡಕರ್ಣಿ ಮನೆತನದ ಮೂಲ ದೇವರ ಸನ್ನಿಧಾನಕ್ಕೆ ತೆರಳಿ ಅಷ್ಟಾವಧಾನ ಸೇವೆ ತರುವಾಯ ಅಲ್ಲಿಯೇ ತಂಗಲಿದೆ. ಮಾರನೆಯ ದಿನ ಪ್ರಾತಃ ಕಾಲದಲ್ಲಿ ಬಾವಿಕೊಡ್ಲ ಗ್ರಾಮದಲ್ಲಿನ ದೇವರ ಗದ್ದೆಗೆ ಬಿಜಯಂಗೈಯ್ಯುವ ಉತ್ಸವವು ಮಿರ್ಜಾನ್ ಸೀಮೆಯ ವಿವೇಕ ನಾಡಕರ್ಣಿ ಅವರ ನೇತೃತ್ವದಲ್ಲಿ ಹೊಸ ಭತ್ತದ ಕದಿರಿಗೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆಯ ನಂತರ ರೈತರು ಸಂಗ್ರಹಿಸಿದ ಹೊಸ ಭತ್ತದ ಕದಿರನ್ನು ನಾಡಕರ್ಣಿ ಮನೆತನಕ್ಕೆ ತಂದು ಶಾಸ್ತ್ರೋಕ್ತ ಪೂಜೆಯೊಂದಿಗೆ ಶ್ರೀ ದೇವರ ಪಾದುಕೆಗೆ ಸಮರ್ಪಿಸಲಾಗುತ್ತದೆ. ಸಾಂಪ್ರದಾಯಿಕ ವಿಧಿಗಳ ತರುವಾಯ ಉತ್ಸವವು ತಿರುಗಿ ಮಂದಿರಕ್ಕೆ ಆಗಮಿಸುವ ವೇಳೆ ಭಕ್ತರಿಗೆ ಹೊಸ ಕದಿರನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ನವರಾತ್ರಿಯಲ್ಲಿ ಭತ್ತದ ಪೈರು ಬೆಳೆದ ಮೇಲೆ ಏರ್ಪಾಟಾಗುವ ಈ ನವಧಾನ್ಯ ಉತ್ಸವವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪ್ರತಿ ಮನೆಯಲ್ಲಿ ಆಚರಿಸುವ ಪದ್ಧತಿ ಅನಾದಿಯಿಂದ ಸಾಗಿ ಬಂದಿದ್ದು ಈ ಉತ್ಸವದ ನಂತರ ಮಾತ್ರ ಗೋಕರ್ಣ ಭಾಗದಲ್ಲಿ ಬೆಳೆಯಲಾದ ಹೊಸ ಭತ್ತವನ್ನು ಮನೆಗೆ ತುಂಬಿಸಿಕೊಳ್ಳುವ ಕಟ್ಟಳೆ ಇವತ್ತಿಗೂ ಜಾರಿಯಲ್ಲಿದೆ.