

ನಿಶಾಂತ್ ಕಿಲೆಂಜೂರು ಕಿನ್ನಿಗೋಳಿ
ಹಿಂದು ಮತ್ತು ಕ್ರೈಸ್ತರ ಭಾವೈಕ್ಯಕ್ಕೆ ಕಿನ್ನಿಗೋಳಿ ಸಮೀಪದ ಏಳಿಂಜೆಯ ಕ್ರೈಸ್ತ ಕುಟುಂಬವೊಂದು ಉದಾಹರಣೆಯಾಗಿದೆ. ಏಳಿಂಜೆ ನಿವಾಸಿ ಕೃಷಿಯನ್ನೇ ನಂಬಿ ಬದುಕುತ್ತಿರುವ ಜೋಸೆಪ್ ಡೋಲ್ಪಿ ಡಿಸೋಜ ಮತ್ತು ಶಾಂತಿ ದಂಪತಿ, ಪುತ್ರ ಸುದೀಪ್ ಅವರ ಜತೆ ಸೇರಿ ಹಿಂದುಗಳ ಕದಿರು ಕಟ್ಟುವ ಹಬ್ಬಕ್ಕೆ (ತೆನೆ ಹಬ್ಬ) ಉಚಿತವಾಗಿ ತೆನೆ ಹಂಚುವ ಸಂಪ್ರದಾಯ ಕಳೆದ ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದು ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ.
ಹಿರಿಯರ ಕಾಲದಿಂದಲೂ ಭತ್ತದ ಕೃಷಿ ಮಾಡಿಕೊಂಡು ಬಂದ ಈ ಕುಟುಂಬ ಹಲವು ವರ್ಷಗಳಿಂದ ಭತ್ತದ ಕೃಷಿಯನ್ನು ಸಂಪೂರ್ಣವಾಗಿ ಕೈ ಬಿಟ್ಟು ತರಕಾರಿ ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಆದರೆ ಹಿಂದುಗಳ ತೆನೆಹಬ್ಬಕ್ಕೋಸ್ಕರ ಹಲವು ವರ್ಷಗಳಿಂದ ಒಂದು ಗದ್ದೆಯಲ್ಲಿ ಭತ್ತ ಬೆಳೆಸುತ್ತಿದ್ದು, ಬೆಳೆದ ತೆನೆಯನ್ನು ಎಲ್ಲರಿಗೂ ಉಚಿತವಾಗಿ ಹಂಚುತ್ತಿದೆ.
ಹಿಂದಿನ ದಿನಗಳಲ್ಲಿ ಎತ್ತುಗಳಿಂದ ಗದ್ದೆ ಉತ್ತು ನಾಟಿ ಮಾಡುತ್ತಿದ್ದರೆ ಈಗ ಟ್ರಾೃಕ್ಟರ್ ಮೂಲಕ ಗದ್ದೆ ಉತ್ತು ನಾಟಿ ಮಾಡುತ್ತಾರೆ. ಹಿಂದುಗಳ ತೆನೆ ಹಬ್ಬ ಯಾವ ದಿನಗಳಲ್ಲಿ ಬರುತ್ತದೆ ಎಂದು ಸ್ಥಳೀಯ ದೇವಸ್ಥಾನಗಳಲ್ಲಿ ಮಾಹಿತಿ ಪಡೆದು, ಆ ಸಂದರ್ಭಕ್ಕೆ ಅನುಗುಣವಾಗಿ ಭತ್ತ ಬೆಳೆಯುವಂತೆ ನಾಟಿ ಮಾಡುತ್ತಾರೆ.
ಸುಮಾರು 5 ಎಕರೆ ಕೃಷಿಭೂಮಿ ಹೊಂದಿರುವ ಜೋಸೆಪ್ ಡೋಲ್ಪಿ ಡಿಸೋಜ ಮತ್ತು ಶಾಂತಿ ದಂಪತಿ ಪ್ರಸ್ತುತ ತೆಂಗು ಮತ್ತು ಅಡಕೆ ತೋಟ ಹೊಂದಿದ್ದು, ಹೆಚ್ಚಾಗಿ ತರಕಾರಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇವರು ಸಾವಯವ ಪದ್ಧತಿಯಲ್ಲಿ ಬೆಂಡೆ, ಸೌತೆ, ಬದನೆ, ಹೀರೆ ಹೀಗೆ ಹಲವು ಬಗೆಯ ತರಕಾರಿ ಕೃಷಿಯನ್ನೂ ಮಾಡುತ್ತಿದ್ದಾರೆ. ಬೆಳೆದ ತರಕಾರಿಯನ್ನು ಶಾಂತಿ ಅವರು ಕಿನ್ನಿಗೋಳಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.
ವಿದೇಶಕ್ಕೂ ಪೈರು ಸರಬರಾಜು
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಏಳಿಂಜೆ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಸ್ಥಾನ, ಮೂರುಕಾವೇರಿ ಮಹಾಮ್ಮಾಯಿ ದೇವಸ್ಥಾನ, ದೈವಸ್ಥಾನಗಳಿಗೂ ಇವರು ತೆನೆ ನೀಡುತ್ತಾರೆ. ಮಾತ್ರವಲ್ಲದೆ ನೂರಾರು ಜನರು ಡೋಲ್ಪಿ ಅವರ ಮನೆಗೆ ಬಂದು ತೆನೆ ತೆಗೆದುಕೊಂಡು ಹೋಗುತ್ತಾರೆ. ದೆಹಲಿ, ಮುಂಬೈ ಮಾತ್ರವಲ್ಲದೆ ಹೊರದೇಶಕ್ಕೂ ಇವರ ಗದ್ದೆಯಿಂದಲೇ ತೆನೆ ಸರಬರಾಜಾಗುತ್ತದೆ. ಸ್ಥಳೀಯ ಚರ್ಚ್‌ಗೆ ಕೂಡ ತೆನೆ ಕೊಡುವ ಸಂಪ್ರದಾಯ ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ.
ನಾನು ಹಲವಾರು ವರ್ಷಗಳಿಂದ ಚರ್ಚ್‌ಗೆ ತೆನೆ ಕೊಡುತ್ತಿದ್ದೇನೆ. ಹಿಂದು ಸಹೋದರರಿಗೆ ಕೂಡ ತೆನೆಯ ಅಗತ್ಯ ಇದೆ ಎಂದು ಅರಿತು ನಂತರದ ದಿನಗಳಲ್ಲಿ ಹೆಚ್ಚು ನಾಟಿಮಾಡಿ ತೆನೆ ತಯಾರಿಸಿ ಯಾವುದೇ ಫಲಾಪೇಕ್ಷೆ ಇಲ್ಲದೆ ವಿತರಿಸುತ್ತಿದ್ದೇನೆ. ಇದೀಗ ನಮ್ಮ ಕೆಲಸಕ್ಕೆ ನನ್ನ ಮಗ ಸುದೀಪನೂ ಸಾಥ್ ನೀಡುತ್ತಿದ್ದಾನೆ. ಈ ಕೆಲಸದಲ್ಲಿ ನನಗೆ ತೃಪ್ತಿ ಇದೆ. ಜೋಸೆಪ್ ಡೋಲ್ಪಿ ಡಿಸೋಜ ತೆನೆ ಬೆಳೆದು ಹಂಚುವ ರೈತರು