

ಉಡುಪಿ: ಕೆಮ್ಮಣ್ಣು ಬಳಿಯ ಕದಿಕೆ ಸಮುದ್ರ ತೀರದಲ್ಲಿ ಜನವರಿಯಲ್ಲಿ 3.50 ಕೋಟಿ ರೂ. ವೆಚ್ಚದಲ್ಲಿ ಕಡಲ ಅಲೆಗಳಿಂದ ವಿದ್ಯುತ್ ಉತ್ಪಾದನೆ ನಡೆಸುವ 100 ಕಿ.ವಾಟ್ ಸಾಮರ್ಥ್ಯದ 3ನೇ ಪ್ರಾಯೋಗಿಕ ವಿದ್ಯುತ್ ಘಟಕ ಆರಂಭಿಸಲಾಗುವುದು ಎಂದು ಸುಸಿ ಗ್ಲೋಬಲ್ ರಿಸಾರ್ಚ್ ಸೆಂಟರ್ ಮುಖ್ಯಸ್ಥ ವಿಜಯ ಕುಮಾರ್ ಹೆಗ್ಡೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಸ್ಥೆ ಕಳೆದ 15 ವರ್ಷಗಳಿಂದ ಕಡಲ ಅಲೆಗಳಲ್ಲಿ ವಿದ್ಯುತ್ ಉತ್ಪಾದನೆ ಬಗ್ಗೆ ನಿರಂತರ ಸಂಶೋಧನೆ ನಡೆಸುತ್ತಿದ್ದು, ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ್ನು ಸಂಸ್ಥೆ ಸ್ವಂತ ಬಳಕೆಗೆ ವಿನಿಯೋಗಿಸಲಿದೆ ಎಂದರು.
ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಂಗಳೂರಿನಲ್ಲಿ ಭೇಟಿ ಮಾಡಿ ಯೋಜನೆಯ ತಂತ್ರಜ್ಞಾನದ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.
ಪ್ರೊ.ನಾರಾಯಣ ಶಾನುಭಾಗ್ ಹಾಗೂ ಮೋಹನ್‌ರಾಜ್ ಹೆಗ್ಡೆ ಉಪಸ್ಥಿತರಿದ್ದರು.