

ಉಡುಪಿ: ಕವಿ, ಕಾದಂಬರಿಕಾರ, ನಾಟಕಕಾರ, ಕಥೆಗಾರ, ಪತ್ರಿಕೋದ್ಯಮಿ ಹೀಗೆ ಕನ್ನಡ ಸಾರಸ್ವತ ಲೋಕದಲ್ಲಿ ಹೆಸರುವಾಸಿಯಾದ ಕಡೆಂಗೋಡ್ಲು ಶಂಕರ ಭಟ್ಟರ ಹೆಸರಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ವತಿಯಿಂದ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಶಂಕರ್ ಸಿಹಿಮೊಗ್ಗೆ ಅವರ ಇರುವೆ ಮತ್ತು ಗೋಡೆ ಅಪ್ರಕಟಿತ ಕವನ ಸಂಕಲನಕ್ಕೆ ಲಭಿಸಿದೆ. ಪ್ರಶಸ್ತಿ 10,000 ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಲತ: ಶಿವಮೊಗ್ಗದವರಾದ ಶಂಕರ್ ಸಿಹಿಮೊಗ್ಗೆ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಹಲವು ಪದ್ಯ, ಕತೆ, ನಾಟಕ, ವಿಮರ್ಶೆ ಮತ್ತು ಲೇಖನಗಳು, ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಾನ ಬಯಲ ಚುಕ್ಕಿಗಳು, ಕಾವ್ಯಯಾನ, ಕಿರಂ ಹೊಸ ಕವಿತೆ ಸಂಪುಟ 1,2,3, ಕವಿತೆ- 2022 ಇವರ ಸಂಪಾದಿತ ಕೃತಿಗಳು. ಇವರ ಹೊಳಲೂರಿನ ಹಾಸ್ಟೆಲ್ ಹುಡುಗರು ಕತೆಯು ಬೆಂಗಳೂರು ವಿ.ವಿಯ ಬಿ.ವಿ.ಎ ಮತ್ತು ಬಿ.ಎಫ್.ಎ ಪದವಿಗೆ ಕನ್ನಡ ಭಾಷೆಯ ಪಠ್ಯವಾಗಿದೆ.