

ಉಡುಪಿ: ಪ್ರತಿನಿತ್ಯ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳೇ ಕಾವ್ಯಕ್ಕೆ ಸ್ಫೂರ್ತಿ. ಸಣ್ಣ ಸಣ್ಣ ಸಂಗತಿಗಳೇ ಕವಿತೆಯ ಸಾಲುಗಳಾಗಿವೆ ಎಂದು ಜೋಯಿಡಾದ ಲೇಖಕಿ, ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ ಹೇಳಿದರು.
ಕವಿ-ಪತ್ರಕರ್ತ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು ಸೋಮವಾರ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸ್ವೀಕರಿಸಿ ಮಾತನಾಡಿದರು.
ಜೋಯಿಡಾದಂಥ ಹಿಂದುಳಿದ ತಾಲೂಕಿನಲ್ಲಿ ಬೆಟ್ಟಗುಡ್ಡದ ಊರಿನಲ್ಲಿ ಕುಡುಬಿ, ಹಾಲಕ್ಕಿ ಜನಾಂಗದ ಮಕ್ಕಳು ಶಿಕ್ಷಣಕ್ಕಾಗಿ ಹೋರಾಟವನ್ನೇ ಮಾಡುತ್ತಿದ್ದಾರೆ. ಪ್ರಾಣಿಗಳ ಆತಂಕದ ನಡುವೆ ಕಾಡುಹಾದಿಯಲ್ಲಿ 6-7 ಕಿ.ಮೀ. ನಿತ್ಯ ನಡೆದು ಬರುತ್ತಾರೆ. ಮಕ್ಕಳು ಶಾಲೆಗೆ ಸ್ವಲ್ಪ ತಡವಾದರೂ ಶಿಕ್ಷಕರು ಹೆದರುವ ಸನ್ನಿವೇಶಗಳಿವೆ. ಇಲ್ಲಿನ ಹೆಣ್ಣುಮಕ್ಕಳ ಜೀವನ, ವಿದ್ಯಾರ್ಥಿಗಳ ಕೌಶಲ ನನ್ನ ಕಾವ್ಯಕ್ಕೆ ಪ್ರೇರಣೆಯಾಗಿವೆ ಎಂದರು.
ಹಿರಿಯ ವಿದ್ವಾಂಸ ಪ್ರೊ.ಕೆ.ಪಿ.ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಠ್ಯಪುಸ್ತಕಗಳು ನಿಂತ ನೀರಾಗಬಾರದು. ಕಾಲಕಾಲಕ್ಕೆ ಆಗಿರುವ ಬದಲಾವಣೆಗಳು, ಹೊಸ ಬೆಳವಣಿಗೆಗಳು ಸೇರಿಸಲ್ಪಡಬೇಕು. ಶಿಕ್ಷಕರು ಜ್ಞಾನದ ಹಸಿವು ಇಂಗಿಸುವ ಗುಣ ಬೆಳೆಸಿಕೊಳ್ಳಬೇಕು. ಕಡೆಂಗೋಡ್ಲು ಶಂಕರ ಭಟ್ಟರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಅಪಾರ ಓದು ಹಾಗೂ ವಿದ್ವತ್ತು ಪಡೆದವರಾದ್ದರಿಂದ ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ವಿಶೇಷ ಮೊನಚು ಅವರಿಂದ ಲಭ್ಯವಾಗಿತ್ತು ಎಂದು ಹೇಳಿದರು.
ಹಿರಿಯ ಲೇಖಕ ಡಾ.ಬಿ.ಜನಾರ್ದನ ಭಟ್ ಉಪನ್ಯಾಸ ನೀಡಿದರು. ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಪ್ರಶಸ್ತಿ ಪುರಸ್ಕೃತರ ಕೃತಿಯ ಕುರಿತು ಮಾತನಾಡಿದರು. ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಸ್ವಾಗತಿಸಿ, ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ಪ್ರಫುಲ್ಲಾ ಕೆ.ವಿ. ಕಾರ್ಯಕ್ರಮ ನಿರ್ವಹಿಸಿದರು.
ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕಾವ್ಯಲೋಕಕ್ಕೆ ಪಂಜೆ ಮಂಗೇಶರಾಯರು ಕಿರು ದಾರಿ ಮಾಡಿಕೊಟ್ಟರು. ಕಡೆಂಗೋಡ್ಲು ಶಂಕರ ಭಟ್ಟರು ಶಾಶ್ವತ ನೆಲೆ ಸ್ಥಾಪಿಸಿದರು. ಗೋಪಾಲಕೃಷ್ಣ ಅಡಿಗರ ಕಾಲದಲ್ಲಿ ಇದು ನಗರವಾಗಿ ಬೆಳೆಯಿತು. ಕೆ.ವಿ.ತಿರುಮಲೇಶ ಇಲ್ಲೊಂದು ಬೃಹತ್ ಬಂಗಲೆಯನ್ನೇ ನಿರ್ಮಿಸಿದರು. ಹೀಗೆ 120 ವರ್ಷಗಳಲ್ಲಿ ಕನ್ನಡ ಸಾಹಿತ್ಯ ಲೋಕ ವಿಸ್ತಾರವಾಗಿ ಬೆಳೆಯಲು ಸಾಧ್ಯವಾಯಿತು.
- ಡಾ.ಬಿ.ಜನಾರ್ದನ ಭಟ್, ಹಿರಿಯ ಲೇಖಕ